ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ಮೆಟ್ರೋ ದಾರಿ ಹಿಡಿಯುತ್ತಿದ್ದರು ಜನ. ಹಾಗಂತ ಶ್ರೀಮಂತರ್ಯಾರು ಕಾರು ಬಿಟ್ಟು ಮೆಟ್ರೋ ಏರುತ್ತಿರಲಿಲ್ಲ. ಮಧ್ಯಮ ವರ್ಗದ, ಬದುಕು ಕಟ್ಟಿಕೊಳ್ಳಲು ಸಮಯ ನೋಡದೆ ದುಡಿಯುವ ಮಂದಿ ಮೆಟ್ರೋ ಮೊರೆ ಹೋಗಿದ್ದರು. ಹೀಗಿರುವಾಗ ದಿಢೀರನೇ ಡಬ್ಬಲ್ ಆಗಿ ದರವನ್ನು ಜಾಸ್ತಿ ಮಾಡಿದರೆ ಸಹಿಸಿಕೊಳ್ಳುವುದು ಹೇಗೆ..? ಬಿಎಂಆರ್ಸಿಎಲ್ ನಡೆಗೆ ಬೇಸತ್ತ ಜನ, ತಮ್ಮದೇ ಬೈಕ್, ಕಾರು ಮೊರೆ ಹೋದರು. ಹೀಗಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಸಹಜವಾಗಿಯೇ ಇಳಿಮುಖವಾಯ್ತು.
![](https://suddione.com/content/uploads/2024/10/gifmaker_me-5-1.gif)
ದರ ಏರಿಕೆ ಸಂಬಂಧ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದರು. ಇದನ್ನೆಲ್ಲ ಗಮನಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಬಿಎಂಆರ್ಸಿಎಲ್ ಗೆ ಸೂಚನೆಯೊಂದನ್ನ ನೀಡಿದ್ದಾರೆ. ಇನ್ನಾದರೂ ದರ ಕಡಿಮೆಯಾಗುತ್ತಾ ನೋಡಬೇಕಿದೆ.
‘ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ. ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎನ್ನುವುದು ನಿಜವಾದರೂ ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
![](https://suddione.com/content/uploads/2025/02/site.webp)