ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 13 : ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಶ್ರೀ ಆಂಜನೇಯ ಸ್ವಾಮಿ ಉಚ್ಛಾಯ ಎಂದರೆ ತುಂಬಾ ಹೆಸರುವಾಸಿ. ಜೊತೆಗೆ ದಾಸಪ್ಪನ ಪವಾಡವು ಕೂಡಾ ಅಷ್ಟೇ ಪ್ರಸಿದ್ದಿ. ಬೆಳಿಗ್ಗೆ ತೇರು ಎಳೆದ ನಂತರ ಮಧ್ಯಾನ್ಹ ಆರಂಭವಾಗುವ ದಾಸಪ್ಪನ ಪವಾಡ ನೋಡುವುದೇ ಒಂದು ಸೌಭಾಗ್ಯ. ಊರಿನ ಜನರೆಲ್ಲರೂ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಈ ದಾಸಪ್ಪನ ಪವಾಡವನ್ನು ಕಣ್ತುಂಬಿಕೊಳ್ಳುತ್ತಾರೆ.
![](https://suddione.com/content/uploads/2024/10/gifmaker_me-5-1.gif)
ನೂರಾರು ವರ್ಷಗಳಿಂದ ಈ ದಾಸಪ್ಪನ ಪವಾಡವನ್ನು ಈ ಊರಿನಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಈ ವರ್ಷದಿಂದ
ಮುರುಡಪ್ಪ ಬದಲಾವಣೆಯಾಗಿರುವುದು ವಿಶೇಷ.
ಸುಮಾರು 46 ವರ್ಗಗಳ ಕಾಲ (1979 – 2024 ರವರೆಗೆ) ಮುರುಡಪ್ಪನಾಗಿ ಸುಧೀರ್ಘ ಸೇವೆ ಸಲ್ಲಿಸಿದ ವೆಂಕಟೇಶ್ ಅವರಿಗೆ 70 ವರ್ಷ ವಯಸ್ಸಾದ ಹಿನ್ನೆಲೆಯಲ್ಲಿ ಅವರ ಸಹೋದರ ಮುರುಳಿಧರ ಅವರ ಮಗನಾಗ ಪ್ರಜ್ವಲ್ (27 ವರ್ಷ) ಅವರು ಈ ವರ್ಷದಿಂದ ಮುರುಡಪ್ಪನಾಗಿ ಸೇವೆ ಸಲ್ಲಿಸಲಿದ್ದಾರೆ. ಬಿಇ (ಮೆಕಾನಿಕಲ್) ಪದವೀಧರರಾಗಿರುವ ಇವರು ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಾದ ಟಿಸಿಎಸ್(TCS) ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ದಾಸಪ್ಪನ ಪವಾಡದ ಸಂಪೂರ್ಣ ಮಾಹಿತಿ ಇಲ್ಲಿದೆ :
ಶ್ರೀ ಆಂಜನೇಯ ತೇರು ಎಳೆದ ಮೇಲೆ ಮಧ್ಯಾಹ್ನ 3 :30 ರ ನಂತರ ಇಳಿ ಹೊತ್ತಿನಲ್ಲಿ ಮುರುಡಪ್ಪನನ್ನು ಆತನ ಮನೆಯಲ್ಲಿ ಹೂವುಗಳಿಂದ ಅಲಂಕರಿಸಿ ಕಾಲಿಗೆ ಗಗ್ಗರ ತೊಡಿಸಿ ಗೋವಿಂದನ ನಾಮ ಸ್ಮರಣೆ, ಮಂಗಳ ವಾದ್ಯಗಳೊಂದಿಗೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆತಂದು ಅಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಗೆಯ ಮೂಲಕ ಅಡವಿನ ಹನುಮಂತರಾಯ ದೇವಸ್ಥಾನ ಮತ್ತು ಭೂತನಾಥನಿಗೆ ವಂದಿಸಿ ಊರಿನ ಪೂರ್ವ ದಿಕ್ಕಿನಲ್ಲಿರುವ ದೊಡ್ಡಘಟ್ಟದ ಕೆರೆ ಬಳಿಯ ಉಗ್ರನರಸಿಂಹ ಸ್ವಾಮಿಯ ದೇವಸ್ಥಾನದ ವರೆಗೂ ಕಾಲ್ನಡಿಗೆಯಲ್ಲೇ ನಡೆದು ಹೋಗಿ ಸೂರ್ಯಾಸ್ತವಾಗುತ್ತಿದ್ದಂತೆ ಅಂದರೆ ಗೋಧೂಳಿ ಸಮಯದಲ್ಲಿ ಉಗ್ರನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಮತ್ತೆ ತುರುವನೂರಿಗೆ ಕಾಲ್ನಡಿಗೆಯಲ್ಲೇ ಹಿಂತಿರುಗುತ್ತಾನೆ.
![](https://suddione.com/content/uploads/2025/01/studio-11.webp)
ತುರುವನೂರಿನ ಅಡವಿ ದೇವಸ್ಥಾನದ ಬಳಿ ಇರುವ ಭೂತನಾಥನ ಆಶ್ರಯದಲ್ಲಿ ಸ್ಪಲ್ಪ ಕಾಲ ವಿರಮಿಸಿ ಸೂರ‍್ಯನು ಅಸ್ತಮಿಸಿದ ಮೂರು ಗಂಟೆಗಳ ಬಳಿಕ ಆ ಸ್ಥಳದಲ್ಲಿ ಗೋವಿಂದ ನಾಮಗಳಿಂದ ಸ್ಮರಿಸುತ್ತಿದ್ದಂತೆ ಪುನಃ ಪವಾಡ ನಡೆಯುತ್ತದೆ.
ಶ್ರೀ ನರಸಿಂಹಸ್ವಾಮಿ ಹಾಗೂ ಆಂಜನೇಯನ ಪ್ರವೇಶದಿಂದ ದಾಸಪ್ಪ ಪವಾಡ ಪುರಷನಾಗುತ್ತಾನೆ ಹೀಗಾಗಿ ಮುಳ್ಳಪಲ್ಲಕ್ಕಿಯಲ್ಲಿ ಸೊಪ್ಪಿನ ಪತ್ರೆ ಹರಡಿ ಅದರ ಮೇಲೆ ಮುರುಡಪ್ಪನನ್ನು ಮಲಗಿಸಿ ಮೆರವಣಿಗೆ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾರೆ. ಅಂದರೆ ಇದರಿಂದ ಎಲ್ಲ ದುಷ್ಟಶಕ್ತಿಗಳು ತೊಲಗಲಿ ಎಂದು ಆ ನಂತರ ಮೆರವಣಿಗೆ ಮುಗಿಯುತ್ತಿದ್ದಂತೆ ಮಧ್ಯರಾತ್ರಿ ದೇವಸ್ಥಾನದಲ್ಲಿ ತುಂಬಿಸಿಕೊಳ್ಳಬೇಕು. ಆಗ ಆಂಜನೇಯ ಮೂಲಸ್ವರೂಪದಲ್ಲಿ ಲೀನವಾಗುತ್ತಾನೆ. ಪ್ರತಿವರ್ಷ ನಡೆದುಕೊಂಡು ಬರುತ್ತಿರುವ ಪವಾಡ ಇದು.
ಇನ್ನೂ ದೇವಸ್ಥಾನದಿಂದ ಮನೆಗೆ ತೆರಳಿದ ನಂತರ ಉಪವಾಸ ಕೈಬಿಡುತ್ತಾರೆ. ಮರುದಿನ ದೇವಸ್ಥಾನಕ್ಕೆ ಬಂದು ಪೂಜೆ ನೆರವೇರಿಸುತ್ತಾರೆ .ಇದಾದ ನಂತರ ರಥೋತ್ಸವದ ಎರಡನೇ ದಿನ ಓಕುಳಿ ದಿನ ಮಂಗಳವಾದ್ಯಗಳೊಂದಿಗೆ ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ಕಲ್ಲೇಶ್ವರ ಸ್ವಾಮಿಯ ಎರಡೂ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿರಿಸಿಕೊಂಡು ಗಂಗಾಪೂಜೆಗೆ ಬಾವಿಗೆ ತೆರಳಿ ಪೂಜೆ ಮುಗಿಸಿಕೊಂಡು ಹಿಂತಿರುಗುವಾಗ ತುರುವಪ್ಪ ಬೇಟೆ ರಂಗಪ್ಪ ದೇವರಿಗೆ ಪೂಜೆಸಲ್ಲಿಸಿ ಅಲ್ಲಿಂದ ಕಲ್ಲೇಶ್ವರ ದೇವಸ್ಥಾನಕ್ಕೆ ಹೋಗಿ ಕಲ್ಲೇಶ್ವರ ಮೂರ್ತಿಯನ್ನು ಗುಡಿತುಂಬಿಸುತ್ತಾರೆ. ಹಾಗೆಯೇ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಸ್ವಾಮಿ ಮೂರ್ತಿಯನ್ನು ಗುಡಿತುಂಬಿಸಲಾಗುತ್ತದೆ ಅಲ್ಲಿಗೆ ಆಂಜನೇಯ ಉತ್ಸವ ಮುಗಿಯುತ್ತದೆ.
![](https://suddione.com/content/uploads/2025/02/site.webp)