ಸೈಬರ್ ಮೋಸದ ಜಾಲಕ್ಕೆ ಸಿಲುಕಬೇಡಿ : ಜಿಪಂ ಸಿಇಒ ಸೋಮಶೇಖರ್

suddionenews
3 Min Read

 

 

ಚಿತ್ರದುರ್ಗ. ಫೆ.11: ದೇಶದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಅಂತರ್ಜಾಲದಲ್ಲಿ ವಂಚನೆ ಮಾಡುವವರು ಕೂಡ ಹೆಚ್ಚಾಗುತ್ತಿದ್ದು, ಹೀಗಾಗಿ ಎಚ್ಚರ ವಹಿಸಿ ಸೈಬರ್ ಮೋಸದ ಜಾಲಕ್ಕೆ ಸಿಲುಕದಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಎನ್‍ಐಸಿ, ಪೊಲೀಸ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಸುರಕ್ಷಿತ ಅಂತರ್ಜಾಲ ದಿನಾಚರಣೆಯ ಅಂಗವಾಗಿ ವಿವಿಧ ಇಲಾಖಾ ಅಧಿಕಾರಿ, ಸಿಬ್ಬಂದಿಗಳಿಗೆ ಏರ್ಪಡಿಸಲಾಗಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ತಂತ್ರಜ್ಞಾನದಲ್ಲಿ ಕ್ರಾಂತಿಯಾಗುತ್ತಿದ್ದು, ಅಂತರ್ಜಾಲದಲ್ಲಿ ಬೆರಳಿನ ತುದಿಯಲ್ಲಿ ಎಲ್ಲ ಮಾಹಿತಿಗಳು ಲಭ್ಯವಾಗುತ್ತವೆ.  ಅದೇ ರೀತಿ ಅಂತರ್ಜಾಲದ ಮೂಲಕ ಸೈಬರ್ ವಂಚನೆ ಮಾಡುವವರು ಕೂಡ ವೈವಿಧ್ಯಮಯ ತಂತ್ರಜ್ಞಾನ ಬಳಸಿಕೊಂಡು ಮೋಸ ಮಾಡುತ್ತಾರೆ.  ಸುಶಿಕ್ಷಿತರೇ ಮೋಸದ ಜಾಲಕ್ಕೆ ಬೀಳುತ್ತಿರುವುದು ಕಂಡುಬರುತ್ತಿದೆ.  ಹೀಗಾಗಿ ಅಂತರ್ಜಾಲ ಬಳಸುವಾಗ ಆದಷ್ಟು ಸುರಕ್ಷತಾ ವಿಧಾನಗಳನ್ನೇ ಅನುಸರಿಸಬೇಕು.  ಅಂತರ್ಜಾಲದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ವಿವಿಧ ಬಗೆಯ ಆಮಿಷಗಳ ಸಂದೇಶಗಳಿಗೆ ಮಾರುಹೋಗಿ ಮೋಸಕ್ಕೆ ಒಳಗಾಗಬಾರದು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು, ಅನಧಿಕೃತ ವೆಬ್‍ಸೈಟ್‍ಗಳನ್ನು ನಂಬಿ, ಮೋಸ ಹೋಗಬಾರದು, ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು.  ವಿವಿಧ ಬಗೆಯ ಸೈಬರ್ ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಸಾರ್ವಜನಿಕರು ಜಾಗೃತರಾಗಬೇಕು ಎಂದರು.
ಜಿಲ್ಲಾ ಎನ್‍ಐಸಿ ಅಧಿಕಾರಿ ಶಾಸ್ತ್ರಿ ಅವರು ಮಾಹಿತಿ ನೀಡಿ, ಡಿಜಿಟಲ್ ಅರೆಸ್ಟ್, ವಂಚನೆ ಕರೆಗಳು, ಬ್ಯಾಂಕ್ ಖಾತೆ, ಎಟಿಎಂ ಬ್ಲಾಕ್ ಮಾಡಲಾಗಿದೆ ಎಂಬುದೆಲ್ಲಾ ಸುಳ್ಳು,  ಯಾವುದೇ ಡಿಜಿಟಲ್ ಅರೆಸ್ಟ್ ಎಂಬುದು ಇಲ್ಲವೇ ಇಲ್ಲ, ಬ್ಯಾಂಕ್‍ಗಳಿಂದ ಖಾತೆದಾರರಿಗೆ ಖಾತೆ ಬ್ಲಾಕ್ ಮಾಡಿದ್ದೇವೆ ಎಂದು ಫೋನ್ ಕರೆ ಮಾಡುವುದಿಲ್ಲ.  ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ, ವಂಚನೆಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ.  ನಕಲೆ ವೆಬ್‍ಸೈಟ್‍ಗಳು, ವಾಟ್ಸಪ್‍ನಲ್ಲಿ ಬರುವಂತಹ ವಂಚನೆಯ ಲಿಂಕ್‍ಗಳು, ವೆಬ್‍ಸೈಟ್‍ನಲ್ಲಿ ಲಭ್ಯವಿರುವ ನಕಲಿ ಕಸ್ಟಮರ್ ಕೇರ್ ನಂಬರ್‍ಗಳು, ಅಪರಿಚಿತ ಮೂಲಗಳಿಂದ ಬರುವ ಇಮೇಲ್ ಅಥವಾ ವೆಬ್‍ಲಿಂಕ್‍ಗಳನ್ನು ಯಾವುದೇ ಕಾರಣಕ್ಕೂ ತೆರೆಯುವ ಪ್ರಯತ್ನ ಮಾಡಬಾರದು.  ಯಾವುದೇ ಕಾರಣಕ್ಕೂ ಪಾಸ್‍ವರ್ಡ್ ಅಥವಾ ಓಟಿಪಿ ಇತರರೊಂದಿಗೆ ಹಂಚಿಕೊಳ್ಳಬಾರದು, ಇದರ ಜೊತೆಗೆ ವಿಶ್ವಾಸಾರ್ಹವಲ್ಲದ ಯಾವುದೇ ಆ್ಯಪ್‍ಗಳನ್ನು ಕಂಪ್ಯೂಟರ್‍ಗೆ ಅಥವಾ ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಾರದು.  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಕಾರಣಕ್ಕೂ ದ್ವೇಷದ, ಸತ್ಯಾಸತ್ಯತೆ ಪರಿಶೀಲಿಸದ ಸಂದೇಶಗಳನ್ನು ನಂಬಬಾರದು ಮತ್ತು ಶೇರ್ ಮಾಡಬಾರದು.  ಫೇಸ್‍ಬುಕ್‍ನಲ್ಲಿ ನಕಲಿ ಖಾತೆ ತೆರೆದು, ತುರ್ತು ಕಾರಣಗಳನ್ನು ಹೇಳಿ ಹಣಕ್ಕೆ ಬೇಡಿಕೆ ಮಾಡುವಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂತಹ ಖಾತೆಗಳ ಬಗ್ಗೆ ರಿಪೋರ್ಟ್ ಮಾಡಬೇಕು.  ಡಿಜಿಟಲ್‍ನಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಚಿತ್ರದುರ್ಗದ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎನ್. ವೆಂಕಟೇಶ್ ಅವರು ಮಾಹಿತಿ ನೀಡಿ, ದೇಶದಲ್ಲಿ ಕಳೆದ ವರ್ಷ ಸೈಬರ್ ಕ್ರೈಂ ನಲ್ಲಿ ಮೋಸಕ್ಕೆ ಬಲಿಯಾಗಿ ಜನ ಹಣ ಕಳೆದುಕೊಂಡ ಮೊತ್ತ ಸುಮಾರು 24 ಸಾವಿರ ಕೋಟಿ ರೂ.ಗಳಾಗಿದೆ.  ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ವರ್ಷ ಮನೆಗಳವು, ದರೋಡೆ, ಸುಲಿಗೆ ಪ್ರಕರಣಗಳ ಒಟ್ಟು ಮೊತ್ತ 04 ಕೋಟಿ ರೂ. ಆಗಿದ್ದರೆ, ಸೈಬರ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡ ಮೊತ್ತ 15.10 ಕೋಟಿ ರೂ. ಆಗಿದೆ.  ಇದರಲ್ಲಿ ಬಹುತೇಕ ಹಣ ದ್ವಿಗುಣದ ಆಸೆಗೆ ಒಳಗಾಗಿ, ಅಧಿಕ ಬಡ್ಡಿದರದ ಆಸೆಗೆ ಒಳಗಾಗಿ ಟ್ರೇಡ್ ಇನ್‍ವೆಸ್ಟ್‍ಮೆಂಟ್ ನಲ್ಲಿ ಹೆಚ್ಚಿನ ಹಣ ಕಳೆದುಕೊಂಡಿದ್ದಾರೆ.  ಹೀಗಾಗಿ ಟ್ರೇಡ್ ಇನ್‍ವೆಸ್ಟ್‍ಮೆಂಟ್ ಮಾಡುವಾಗ ಆದಷ್ಟು ಎಚ್ಚರ ವಹಿಸಬೇಕು, ಸೆಬಿ ನಲ್ಲಿ ಹಾಗೂ ಆರ್‍ಬಿಐ ನಲ್ಲಿ ನೋಂದಣಿ ಆದವರಲ್ಲಿ ಮಾತ್ರ ಟ್ರೇಡ್ ವಹಿವಾಟು ಮಾಡಬೇಕು.  ಡಿಜಿಟಲ್ ಪೇಮೆಂಟ್ ಮಾಡುವಾಗ ಸುರಕ್ಷಿತ ವಿಧಾನ ಬಳಸಬೇಕು.  ನಕಲಿ ಸಾಲದ ಆ್ಯಪ್‍ಗಳ ಮೂಲಕ ಸಾಲ ಪಡೆಯುವುದು, ವರ್ಕ್ ಫ್ರಂ ಹೋಂ ನಲ್ಲಿ ಮನೆಯಲ್ಲಿದ್ದುಕೊಂಡು ಹಣ ಗಳಿಸಿ ಎಂಬ ಆಮಿಷಗಳಿಗೆ ಒಳಗಾಗಬಾರದು ಎಂದು ಹೇಳಿದರು.
ಹದಿಹರೆಯದ ಯುವಕರು, ಯುವತಿಯರು, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹೆಚ್ಚು ಜಾಗೃತರಾಗಬೇಕು.  ಪ್ರೀತಿ, ಪ್ರೇಮದ ಹೆಸರಿನಲ್ಲಿ ಮೋಸಕ್ಕೆ ಒಳಗಾಗಿ, ವಿಡಿಯೋ, ಫೋಟೋಗಳನ್ನು ದ್ವೇಷಕ್ಕೆ ಅಥವಾ ಬ್ಲಾಕ್‍ಮೇಲ್ ಮೂಲಕ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಅತ್ಯಂತ ಎಚ್ಚರ ವಹಿಸಬೇಕು.  ಬ್ಯಾಂಕ್ ಖಾತೆಗಳನ್ನು ಮಾಡಿಸಿ, ಅದರ ನಿರ್ವಹಣೆಯನ್ನು ಬೇರೆಯವರಿಗೆ ವಹಿಸಿಕೊಡುವ ಜಾಲ ಜಿಲ್ಲೆಯಲ್ಲಿ ಕಂಡುಬಂದಿದ್ದು, ಈ ಬಗ್ಗೆ ಮುಖ್ಯವಾಗಿ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು.  ಯಾವುದೇ ಸೈಬರ್ ಕ್ರೈಂ ನಲ್ಲಿ, ಬ್ಯಾಂಕ್ ಮೂಲಕ ಹಣ ಕಳೆದುಕೊಂಡಲ್ಲಿ ತಕ್ಷಣವೇ 1930 ಸಂಖ್ಯೆಗೆ ಕರೆ ಮಾಡಿದರೆ, ದೇಶದ ಯಾವುದೇ ಬ್ಯಾಂಕ್‍ನ ಖಾತೆಯನ್ನು ಫ್ರೀಜ್ ಮಾಡಿಸಲು ಅವಕಾಶವಿದೆ.  ಹೀಗಾಗಿ ವಂಚನೆಗೆ ಒಳಗಾಗದಂತೆ ಎಚ್ಚರ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ. ಕುಮಾರಸ್ವಾಮಿ, ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್‍ಪಿ ಉಮೇಶ್ ಈಶ್ವರ್ ನಾಯ್ಕ್ ಪಾಲ್ಗೊಂಡಿದ್ದರು.  ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *