ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
![](https://suddione.com/content/uploads/2024/10/gifmaker_me-5-1.gif)
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 10 : ಅನುದಾನದ ಕೊರತೆಯಿಂದ ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಗೆ ನೀರುಣಿಸಬೇಕಾಗಿರುವ ಭದ್ರಾ ಮೇಲ್ದಂಡೆ ಕಾಮಗಾರಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾ ಮೇಲ್ದಂಡೆ ಯೋಜನೆಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಐದು ಸಾವಿರದ ಮುನ್ನೂರು ಕೋಟಿ ರೂ.ಗಳು ಇನ್ನು ಬಿಡುಗಡೆಯಾಗಿಲ್ಲವೆಂದು ರಾಜ್ಯ ಸರ್ಕಾರ ಕೇಂದ್ರದ ಕಡೆ ಬೆರಳು ಮಾಡಿ ತೋರಿಸುವುದರ ಬದಲಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಜವಾಬ್ದಾರಿಯನ್ನರಿತು ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗಕ್ಕೆ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಜಿಲ್ಲೆಗೆ ನೀರು ಹರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ರಾಜ್ಯ ಸರ್ಕಾರ ಕೇಂದ್ರದ ವಿರುದ್ದ ಸುಪ್ರೀಂಕೋರ್ಟ್ ಮೊರೆ ಹೋಗಿ ಭದ್ರಾಮೇಲ್ದಂಡೆ ಯೋಜನೆಗಾಗಿ ಘೋಷಿಸಿರುವ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಪಡೆಯಬೇಕು. ಕಳೆದ ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಹಾಗೂ ತೊಗರಿ ಬೆಳೆ ನಷ್ಟಕ್ಕೊಳಗಾದ ರೈತರಿಗೆ ಇದುವರೆವಿಗೂ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಜಿಲ್ಲಾಡಳಿತ ತಕ್ಷಣವೆ ರೈತರಿಗೆ ಪರಿಹಾರ ವಿತರಿಸಬೇಕು. ಅಧಿಕಾರದ ಆಸೆಯಿಂದ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ವಿರುದ್ದ ಧ್ವನಿ ಎತ್ತದಂತಾಗಿದ್ದಾರೆ. ಪ್ರಧಾನಿ ಮೋದಿರವರು ಭದ್ರಾಮೇಲ್ದಂಡೆ ಯೋಜನೆಗಾಗಿ ಘೋಷಿಸಿರುವ ಐದು ಸಾವಿರದ ಮುನ್ನೂರು ರೂ.ಗಳನ್ನು ತರಬೇಕಾಗಿರುವುದರಿಂದ ಪಕ್ಷ ಬೇಧ ಮರೆತು ಕೇಂದ್ರಕ್ಕೆ ನಿಯೋಗ ಹೋಗುವಂತೆ ಆಗ್ರಹಿಸಿದರು.
![](https://suddione.com/content/uploads/2025/01/studio-11.webp)
ಬೇಸಿಗೆ ಈಗಾಗಲೆ ಆರಂಭವಾಗಿರುವುದರಿಂದ ಕೃಷಿಗಾಗಿ ರೈತರು ನೀರಾವರಿ ಪಂಪ್ಸೆಟ್ಗಳನ್ನು ಅವಲಂಭಿಸಿರುವುದರಿಂದ ಟ್ರಾನ್ಸ್ಫಾರ್ಮರ್ಗಳು ಸುಡುತ್ತಿವೆ. ಸುಟ್ಟ ಟಿ.ಸಿ.ಗಳನ್ನು ಬದಲಾಯಿಸುವ ಕೆಲಸವಾಗುತ್ತಿಲ್ಲ. ಇದರಿಂದ ರೈತರು ಹೈರಾಣಾಗಿದ್ದಾರೆ. ಜಿಲ್ಲೆಗೆ ಪ್ರತ್ಯೇಕ ಟ್ರಾನ್ಸ್ಫಾರ್ಮರ್ಗಳ ಬ್ಯಾಂಕ್ ಸ್ಥಾಪಿಸಿ ರೈತರ ನೆರವಿಗೆ ಮುಂದಾಗುವಂತೆ ಕೋರಿದರು.
ರೈತ ಮುಖಂಡರುಗಳಾದ ಬಸ್ತಿಹಳ್ಳಿ ಜಿ.ಸುರೇಶ್ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕೆ.ಎಂ.ಕಾಂತರಾಜು, ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಧನಂಜಯ, ಎನ್.ಎಸ್.ರಂಗೇಗೌಡ,
ಗೌಸ್ಪೀರ್, ಅನಂತರೆಡ್ಡಿ, ಬಿ.ಓ.ಶಿವಕುಮಾರ್, ಕೆ.ಸಿ.ಹೊರಕೇರಪ್ಪ, ಪಿ.ಚೇತನ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
![](https://suddione.com/content/uploads/2025/02/site.webp)