144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ ಪ್ರಯಾಗ್ ರಾಜ್ ಗೆ ಭೇಟಿ ನೀಡಿ, ಪುಣ್ಯ ಸ್ನಾನ ಮಾಡಿ ಬರುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದಕ್ಕೆಂದೆ ಹೋಗುತ್ತಾರೆ. ಪ್ರಯಾಗ್ ರಾಜ್ ಗೆ ಹೋಗುವುದಕ್ಕೆ ಆಗದೆ ಇರುವವರು ಇದೀಗ ಕರ್ನಾಟಕದಲ್ಲಿಯೇ ಕುಂಭಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಬಹುದು.
ಹೌದು ಕರ್ನಾಟಕದ ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿಯೂ ತ್ರಿವೇಣಿ ಸಂಗಮ ನದಿ ಹರಿಯುತ್ತದೆ. ಇಲ್ಲಿಯೂ ಕುಂಭಮೇಳಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ಫೆಬ್ರವರಿ 10 ರಂದು ಇಲ್ಲಿ ಕುಂಭಮೇಳ ನಡೆಯಲಿದೆ. ತಲಕಾವೇರಿಯಲ್ಲಿ ಜನ್ಮ ತಾಳಿ ಭಾಗಮಂಡಲದಲ್ಲಿ ತ್ರಿವೇಣಿ ಸಂಗಮವನ್ನು ಸೃಷ್ಟಿಸಿ, ಹರಿಯುವ ಕಾವೇರಿಯೂ ತಾನೂ ಹರಿದ ಕಡೆಗಳಲ್ಲೆಲ್ಲಾ ಪವಿತ್ರ ಕ್ಷೇತ್ರಗಳನ್ನು ಸೃಷ್ಟಿಸಿದ್ದು, ಅದರಲ್ಲಿ ತಿರುಮಕೂಡಲು ಒಂದಾಗಿದೆ.
ಇಲ್ಲಿಯೂ ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳವನ್ನು ನಡೆಸಲಾಗುತ್ತದೆ. ಕಳೆದ 11 ಕುಂಭಮೇಳವನ್ನ ತಿ.ನರಸೀಪುರದ ತಿರುಮಕೂಡಲಿನಲ್ಲಿ ನಡೆಸಲಾಗಿದೆ. ಕೋವಿಡ್ ಕಾರಣದಿಂದ 12ನೇ ಕುಂಭಮೇಳ ನಡೆದಿಲ್ಲ. ಇದೀಗ ಆರು ವರ್ಷಗಳ ಬಳಿಕ ಮತ್ತೆ ಕುಂಭಮೇಳ ನಡೆಸಲು ಎಲ್ಲಾ ತಯಾರಿ ನಡೆಸಲಾಗಿದೆ. ಇಲ್ಲಿಗೂ ಪುಣ್ಯ ಸ್ನಾನಕ್ಕಾಗಿ ಸಹಸ್ರಾರು ಭಕ್ತರು ಭಾಗಿಯಾಗುವ ನಿರೀಕ್ಷೆ ಇದೆ. ಹೀಗಾಗಿ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಭಕ್ತರ ಅನುಕೂಲಕ್ಕೆ ತಕ್ಕಂತೆ ತಿ.ನರಸೀಪುರದಲ್ಲಿ ಕಾವೇರಿ, ಕಪಿಲೆ ಮತ್ತು ಸ್ಟಟಿ ಸರೋವರ ಈ ಮೂರು ನದಿಗಳು ಸಂಗಮವಾಗುವ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಕ್ಕೆ ಅನುಕೂಲವಾಗುವಂತೆ ಮೂರು ಕಡೆ ಸ್ನಾನಘಟ್ಟದ ವ್ಯವಸ್ಥೆ ಮಾಡಲಾಗುತ್ತಿದೆ. ಹೀಗಾಗಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಬಹುದಾಗಿದೆ.