ಚಿತ್ರದುರ್ಗಕ್ಕೆ ಆಗಮಿಸಿದ ಕರ್ನಾಟಕ ಶ್ರಮಿಕ್ ಸಮ್ಮಾನ್ ಯಾತ್ರೆ : ಫೆ.25 ರಂದು ನವದೆಹಲಿಯಲ್ಲಿ ಬೃಹತ್ ಸಮಾವೇಶ

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 06 : ಅಸಂಘಟಿತ ಕಾರ್ಮಿಕರಿಗೆ ಜೀವನ ಭದ್ರತೆ ಒದಗಿಸುವ ದೃಷ್ಟಿಯಿಂದ ಬೆಂಗಳೂರಿನಿಂದ ಗುಲ್ಬರ್ಗಕ್ಕೆ ಕರ್ನಾಟಕ ಶ್ರಮಿಕ್ ಸಮ್ಮಾನ್ ಯಾತ್ರೆ ಹೊರಟಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ಕಾರ್ಯದರ್ಶಿ ಲೀಲಾವತಿ ತಿಳಿಸಿದರು.

ಬೆಂಗಳೂರಿನಿಂದ ಬುಧವಾರ ಹೊರಟ ಕರ್ನಾಟಕ ಶ್ರಮಿಕ್ ಸಮ್ಮಾನ್ ಯಾತ್ರೆ ಗುರುವಾರ ಚಿತ್ರದುರ್ಗಕ್ಕೆ ಆಗಮಿಸಿದಾಗ ಬಾಲಭವನದ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಸಭೆ ಉದ್ದೇಶಿಸಿ ಮಾತನಾಡಿದರು.

ಅಸಂಘಟಿತ ಕಾರ್ಮಿಕರಿಗೆ ಪಿ.ಎಫ್. ಇ.ಎಸ್.ಐ. ಸೇರಿದಂತೆ ಸ್ವಂತ ನಿವೇಶನ, ಮನೆಗಳನ್ನು ಕಟ್ಟಿಸಿಕೊಡಬೇಕು. ಕೈಗಾರಿಕಾ ಅಭಿವೃದ್ದಿ ವಲಯಗಳಲ್ಲಿ ಕಾರ್ಮಿಕರ ವಸತಿಗಾಗಿ ಭೂಮಿಯನ್ನು ಕಾಯ್ದಿರಿಸಬೇಕು. ಬೆಂಗಳೂರಿನ ಫ್ರೀಡಂ ಪಾರ್ಕ್‍ನಿಂದ ಹೊರಟಿರುವ ಪಾದಯಾತ್ರೆ ಚಿತ್ರದುರ್ಗ, ದಾವಣಗೆರೆ, ಇಳಕಲ್, ಜೀವರ್ಗಿ ಮೂಲಕ ಕಲಬುರ್ಗಿ ತಲುಪಿ ಅಸಂಘಟಿತ ಕಾರ್ಮಿಕರನ್ನು ಜಾಗೃತಿಗೊಳಿಸಲಿದೆ ಎಂದು ಹೇಳಿದರು.

ಹನ್ನೊಂದು ರಾಜ್ಯಗಳಿಂದ ಹೊರಟಿರುವ ಯಾತ್ರೆ ಫೆ.25 ರಂದು ನವದೆಹಲಿ ತಲುಪಿ ಜಂತರ್‍ಮಂತರ್‍ನಲ್ಲಿ ಬೃಹತ್ ಸಮಾವೇಶ ನಡೆಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆಂದರು.

ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡಿ ಅಸಂಘಟಿತ ಕಾರ್ಮಿಕರ ಸಮಸ್ಯೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನಕ್ಕೆ ತರುವ ಉದ್ದೇಶವಿಟ್ಟುಕೊಂಡು ಕರ್ನಾಟಕ ಶ್ರಮಿಕ್ ಸಮ್ಮಾನ್ ಯಾತ್ರೆ ಆರಂಭಗೊಂಡಿರುವುದು ನಿಜಕ್ಕೂ ಕಾರ್ಮಿಕರಲ್ಲಿ ಶಕ್ತಿ ತುಂಬಿದಂತಾಗಿದೆ. ಮನೆ ಕೆಲಸ, ಹೋಟಲ್, ಅಂಗಡಿಗಳಲ್ಲಿ ಯಾವುದೇ ಜೀವನ ಭದ್ರತೆಯಿಲ್ಲದೆ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರ ಬೇಡಿಕೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಪಂದಿಸಿ ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಗಣೇಶ್ ಮಾತನಾಡುತ್ತ ಅಸಂಘಟಿತ ಕಾರ್ಮಿಕರಿಗೆ ರಕ್ಷಣೆ, ಉದ್ಯೋಗ, ಆರೋಗ್ಯ ಮತ್ತು ಸುರಕ್ಷತೆ ಒದಗಿಸಬೇಕು. ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಲೈಂಗಿಕ ಕಿರುಕುಳ ನೀಡುವವರ ವಿರುದ್ದ ಕಠಿಣ ಕ್ರಮ ಕೈಗೊಂಡು ಸುರಕ್ಷತೆ ಮತ್ತು ಶಿಶುಪಾಲನಾ ಕೇಂದ್ರಗಳನ್ನು ತೆರೆದು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಶ್ರಮಿಕ ಸಂಘದ ಗೌರವಾಧ್ಯಕ್ಷೆ ನಳಿನ, ಉಪಾಧ್ಯಕ್ಷ ಕೃಷ್ಣ, ಜಿಲ್ಲಾ ಬಡಗಿ ಕೆಲಸಗಾರರ ಸಂಘದ ಅಧ್ಯಕ್ಷ ಎ.ಜಾಕಿರ್‍ಹುಸೇನ್, ಟೈಲರ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಟಿ.ಶಫಿವುಲ್ಲಾ, ರಂಗಸ್ವಾಮಿ, ಮೈಲಾರಪ್ಪ, ಸಬೀನಾ, ಇಮಾಂಸಾಬ್, ಮಲ್ಲೇಶ್, ಮಚ್ಚಂದ್ರಪ್ಪ, ಸಿದ್ದಲಿಂಗಪ್ಪ, ನಾಗರಾಜ್, ಶಫಿ, ಪ್ರಸನ್ನ ಇವರುಗಳು ವೇದಿಕೆಯಲ್ಲಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *