ಹುಬ್ಬಳ್ಳಿ: ರಾಜ್ಯ ಬಿಜೆಪಿಯಲ್ಲಿ ಸದ್ಯ ರಾಜ್ಯಾಧ್ಯಕ್ಷರ ಬದಲಾವಣೆಯದ್ದೇ ಸದ್ದು ಸುದ್ದಿ. ರಾಜ್ಯಾಧ್ಯಕ್ಷರ ಬದಲಾವಣೆಗಾಗಿ ಲಿಂಗಾಯತ ಸಮುದಾಯದವರು ಪ್ರತ್ಯೇಕ ಸಭೆ ಕೂಡ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರ ವಿಚಾರವಾಗಿ ಲಿಂಗಾಯತರು ಪ್ರತ್ಯೇಕ ಸಭೆ ಮಾಡಿಲ್ಲ. ವೈಯಕ್ತಿಕ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.
![](https://suddione.com/content/uploads/2024/10/gifmaker_me-5-1.gif)
ಹುಬ್ಬಳ್ಳಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಯತ್ನಾಳ್ ಮತ್ತು ಇನ್ನಿತರರು ನೀಡಿರುವ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ. ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಒಬ್ಬರು ಇದ್ದಾರೆ. ಈಗ ಚುನಾವಣೆಯೂ ಬಂದಿದೆ. ಯಾರನ್ನು ನೇಮಕ ಮಾಡಬೇಕು, ಯಾರೂ ಬೇಡ ಎಂಬುದು ಹೈಕಮಾಂಡ್ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳುತ್ತಾರೆ. ಪಕ್ಷದ ಆಂತರಿಕ ವಿಚಾರವನ್ನು ಮಾಧ್ಯಮದವರ ಮುಂದೆ ಚರ್ಚಿಸಲ್ಲ ಎಂದಿದ್ದಾರೆ.
ಇದೇ ವೇಳೆ ಮೋದಿಯವರನ್ನು ಬದಲಾಯಿಸುವ ಚರ್ಚೆ ನಡೆದಿದೆ ಎಂದು ಹೇಳಿದ್ದ ಸಂತೋಷ್ ಲಾಡ್ ಮಾತಿಗೆ ಪ್ರತಿಕ್ರಿಯೆ ನೀಡಿದ್ದು, ಸಂತೋಷ್ ಲಾಡ್ ಅವರೇ ಮೊದಲು ನಿಮ್ಮ ಮನೆ ಸರಿ ಮಾಡಿಕೊಳ್ಳಿ. ನಂತರ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಿ. ಪ್ರಧಾನಿ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ. ಕಾಂಗ್ರೆಸ್ ನವರಿಗೆ ಮುಸ್ಲಿಂ, ಅಲ್ಪಸಂಖ್ಯಾತರನ್ನು ಬಿಟ್ಟರೆ ಬೇರೆ ಯಾರೂ ಗೊತ್ತಿಲ್ಲ. ದೆಹಲಿಯ ಎಕ್ಸಿಟ್ ಪೋಲ್ ಏನಾಗಿದೆ ಅಂತ ಎಲ್ಲರಿಗೂ ಗೊತ್ತು. ದೆಹಲಿಯಲ್ಲಿ ಕಾಂಗ್ರೆಸ್ ಗೆ ಒಂದು ಅಥವಾ ಎರಡು ಸೀಟ್ ಬಂದರೆ ಹೆಚ್ಚು. ನರೇಂದ್ರ ಮೋದಿ ಬದಲಾವಣೆಯ ಬಗ್ಗೆ ನೀವೂ ಮಾತಾಡ್ತಾ ಇದ್ದೀರಿ. ಮೊದಲು ನಿಮ್ಮ ರಾಹುಲ್ ಗಾಂಧಿಯನ್ನು ಬದಲಿಸಿ ಎಂದಿದ್ದಾರೆ.
![](https://suddione.com/content/uploads/2025/01/studio-11.webp)