ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 05 : ಶೋಷಣೆಯನ್ನು ಮೆಟ್ಟಿ ನಿಲ್ಲಬೇಕಾದರೆ ಮೊದಲು ಹೆಣ್ಣು ಶಿಕ್ಷಣವಂತಳಾಗಿ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಬಾಪೂಜಿ ಸಮೂಹ ಸಂಸ್ಥೆಗಳು ಹಾಗೂ ಪೊಲೀಸ್ ಬೇಟೆ ವಾರ ಪತ್ರಿಕೆ ಇವುಗಳ ಸಹಯೋಗದೊಂದಿಗೆ ರಾಷ್ಟ್ರೀಯ ಹೆದ್ದಾರಿ-13 ರಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಹಿಳೆಯರ ಸಬಲೀಕರಣ ಎತ್ತ ಸಾಗಿದೆ ಎಂಬ ವಿಚಾರ ಕುರಿತ ಉಪನ್ಯಾಸ-ಸಂವಾದ ಉದ್ಘಾಟಿಸಿ ಮಾತನಾಡಿದರು.
ನೋವು ತಡೆಯುವ ಶಕ್ತಿ ಚೈತನ್ಯವುಳ್ಳ ಹೆಣ್ಣಿಗೆ ಅವಕಾಶವಿಲ್ಲ. ಮಹಿಳೆಗೆ ಶೇ.33 ಪರ್ಸೆಂಟ್ ಮೀಸಲಾತಿ ಘೋಷಿಸಿದೆ. ಇದು ಸಾಲದು. ಶೇ.ಐವತ್ತರಷ್ಟು ಮೀಸಲಾತಿ ಬೇಕು. ಹೆಣ್ಣು ಮೀಸಲಾತಿಯನ್ನು ಬೇಡಬಾರದು ಕಿತ್ತುಕೊಳ್ಳಬೇಕು ಎಂದು ಜಾಗೃತಿಗೊಳಿಸಿದರು.
ಮಹಿಳಾ ಪರ ಮೊಟ್ಟ ಮೊದಲ ಕಾನೂನು ಜಾರಿಗೆ ತಂದಿದ್ದು, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್. ಮಹಿಳೆಯ ಪರ ನಿಲ್ಲದ ಯಾವ ಸರ್ಕಾರವೇ ಇರಲಿ ಚುನಾವಣೆಯಲ್ಲಿ ಮಂಡಿಯೂರಿಸಿ ಮನೆಗೆ ಕಳಿಸುವ ಶಕ್ತಿ ಹೆಣ್ಣಿಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿರುವ ಐದು ಉಚಿತ ಗ್ಯಾರೆಂಟಿಗಳು ಹೆಣ್ಣನ್ನು ಸಬಲೀಕರಣಗೊಳಿಸುತ್ತಿದೆ. ಗೃಹಲಕ್ಷ್ಮಿ ಬಾಳು ಕೊಟ್ಟಿದೆ. ಸರ್ಕಾರದಲ್ಲಿ ಏನೆಲ್ಲಾ ಯೋಜನೆಗಳಿದೆ. ಎಷ್ಟು ಸಬ್ಸಿಡಿ ಸಿಗುತ್ತದೆ. ಜಿಲ್ಲಾಧಿಕಾರಿಯಿಂದ ಹಿಡಿದು ಜಿಲ್ಲಾ ಮಟ್ಟದ ಅಧಿಕಾರಿಗಳು ಯಾರ್ಯಾರಿದ್ದಾರೆನ್ನುವುದನ್ನು ತಿಳಿದುಕೊಳ್ಳಬೇಕು. ಸರ್ಕಾರವೆಂದರೆ ಜನ. ಅಧಿಕಾರಿಗಳೆಂದರೆ ಜನರ ಸೇವಕರು ಎನ್ನುವುದನ್ನು ವಿದ್ಯಾರ್ಥಿಗಳು ಮೊದಲು ತಿಳಿದುಕೊಂಡಿರಬೇಕು ಎಂದರು.
ನಿಮಗೆ ಏನಾದರೂ ತೊಂದರೆಯಾದರೆ ರಕ್ಷಣೆಗೆ ಕಾವಲು ಸಮಿತಿಯಿದೆ. ಶಿಕ್ಷಣವೆಂದರೆ ಕೇವಲ ಪುಸ್ತಕ, ಪದವಿಯಲ್ಲ. ಜ್ಞಾನ, ತಾಳ್ಮೆ, ಸೇವೆ, ದೇಶಭಕ್ತಿಯೇ ನಿಜವಾದ ಶಿಕ್ಷಣ. ಹೆಣ್ಣಿಗೆ ಜೀವನದಲ್ಲಿ ಗೌರವ, ಪ್ರೋತ್ಸಾಹ, ಅವಕಾಶ ಸಿಗಬೇಕು. ನಿಮ್ಮ ಮೇಲೆ ಯಾರಾದರೂ ದೌರ್ಜನ್ಯ, ದಬ್ಬಾಳಿಕೆ, ಹಲ್ಲೆ, ಲೈಂಗಿಕ ಕಿರುಕುಳ ನೀಡಿದರೆ ಹೆದರುವ ಅಗತ್ಯವಿಲ್ಲ. ಧೈರ್ಯದಿಂದ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿ. ಶಿಕ್ಷಣ ಪಡೆದು ಹೆಣ್ಣು ಮನೆಯಲ್ಲಿ ಕುಳಿತರೆ ಪ್ರಯೋಜನವಿಲ್ಲ. ಕೆಲಸ ಮಾಡಿ ಹಣ ಸಂಪಾದಿಸಿ ತನ್ನ ಕಾಲ ಮೇಲೆ ತಾನು ನಿಂತಾಗ ಜೀವನದಲ್ಲಿ ಎಂತಹ ಸಮಸ್ಯೆ, ಸವಾಲು ಎದುರಾದರೂ ಮೆಟ್ಟಿ ನಿಲ್ಲಬಹುದು ಎಂದು ವಿದ್ಯಾರ್ಥಿನಿಯರಿಗೆ ಡಾ.ನಾಗಲಕ್ಷ್ಮಿಚೌಧರಿ ಕಿವಿಮಾತು ಹೇಳಿದರು.
ಪ್ರತಿ ಐದು ಸೆಕೆಂಡಿಗೊಂದು ಸೈಬರ್ ಕ್ರೈಂ ನಡೆಯುತ್ತಿದೆ. ಮೊಬೈಲ್ ಫೋನ್‍ಗಳಿಂದ ಅಪರಾಧಗಳು ಹೆಚ್ಚುತ್ತಿವೆ. ಭಯಪಟ್ಟರೆ ಶೋಷಣೆ ನಿಲ್ಲುವುದಿಲ್ಲ. ಸಮಯ ಬಂದಾಗ ಪ್ರಶ್ನೆ ಮಾಡುವ ಎದೆಗಾರಿಕೆ ಬೆಳೆಸಿಕೊಳ್ಳಿ. ಸ್ವಾವಲಂಭಿಗಳಾಗುವತನಕ ವಿವಾಹವಾಗಬೇಡಿ ಎಂದರು.
ಹೊಸದುರ್ಗ ಬ್ರಹ್ಮವಿದ್ಯಾನಗರ ಭಗೀರಥಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರ ಶೋಷಣೆ ನಿಲ್ಲುತ್ತಿಲ್ಲ. ಹೆಣ್ಣನ್ನು ತಾಯಿ ಸ್ವರೂಪಿಯಂತೆ ಕಾಣಬೇಕು. ಶೇ.ಐವತ್ತರಷ್ಟು ಮೀಸಲಾತಿಯನ್ನು ಪಡೆದುಕೊಳ್ಳುವ ಹಕ್ಕು ಹೆಣ್ಣಿಗಿದೆ. ಹೆಣ್ಣು ಮಾರಾಟದ ವಸ್ತುವಾಗುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡು ತಡೆಯುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ತಿಳಿಸಿದರು.
ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡುತ್ತ ಬಾಲ್ಯ ವಿವಾಹವಾಗುವುದು ಕಾನೂನಿನಡಿ ಅಪರಾಧ. ಹೆಣ್ಣಿಗೆ ಹದಿನೆಂಟು, ಗಂಡಿಗೆ 21 ವರ್ಷ ವಯಸ್ಸಾಗುವ ಮೊದಲೆ ಮದುವೆ ಮಾಡಬಾರದು. ಒಂದು ವೇಳೆ ವಿವಾಹವಾದರೆ ಪೋಷಕರುಗಳಿಗೆ ಶಿಕ್ಷೆಯಾಗುತ್ತದೆ ಎನ್ನುವ ಅರಿವು ಪ್ರತಿಯೊಬ್ಬರಲ್ಲಿಯೂ ಇರಬೇಕೆಂದರು.
ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು.
ಸ್ಕೌಟ್ ಅಂಡ್ ಗೈಡ್ಸ್ ಕೇಂದ್ರ ಸ್ಥಾನಿಕ ಆಯುಕ್ತ ಎಂ.ಕೆ.ಅನಂತರೆಡ್ಡಿ, ಗೈಡ್ಸ್ ಜಿಲ್ಲಾ ಆಯುಕ್ತೆ ಸವಿತಾ ಶಿವಕುಮಾರ್, ರುದ್ರಾಣಿ ಗಂಗಾಧರ್ ವೇದಿಕೆಯಲ್ಲಿದ್ದರು.
ಸ್ವಾಮಿ ವಿವೇಕಾನಂದ ರಾಜ್ಯ ಪ್ರಶಸ್ತಿ ಪುರಸ್ಕøತ ಯುವ ವಕೀಲ ಓ.ಪ್ರತಾಪ್‍ಜೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ ಹಾಗೂ ಸಿಬ್ಬಂದಿಯವರು ಉಪನ್ಯಾಸ ಕಾರ್ಯಕ್ರಮದಲ್ಲಿದ್ದರು.
ಹೋರಾಟಗಾರ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಇವರನ್ನು ಸನ್ಮಾನಿಸಲಾಯಿತು.