ಫೆ. 7 ರಿಂದ ಅಚ್ಚುಕಟ್ಟು ಪ್ರದೇಶಕ್ಕೆ ವಿವಿ ಸಾಗರ ನೀರು

suddionenews
2 Min Read

ಹಿರಿಯೂರು: ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಿಂದ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿ ಎಂದು ರೈತರ ಒತ್ತಾಯದ ಮೇರೆಗೆ ಸಚಿವ ಡಿ ಸುಧಾಕರ್ ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಫೆ 7 ರಿಂದ 30 ದಿನಗಳ ಕಾಲ ಒಂದನೇ ಹಂತದ ನೀರು ಹರಿಸಲು ತೀರ್ಮಾನಿಸಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ವಿವಿ ಸಾಗರ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳು, ನೀರಾವರಿ ಸಲಹಾ ಸಮಿತಿ ಸದಸ್ಯರು, ಕೃಷಿ ಮತ್ತು ತೋಟಗಾರಿಕೆ ನಿರ್ದೇಶಕರು, ಅಧಿಕಾರೇತರ ಸದಸ್ಯರು ಮತ್ತು ಜಲ ಸಂಪನ್ಮೂಲ ಇಲಾಖೆ ತಾಂತ್ರಿಕ ಅಧಿಕಾರಿಗಳ ಸಲಹೆ ಪಡೆದು 2024-25 ನೇ ಸಾಲಿನಲ್ಲಿ ಅಚ್ಚುಕಟ್ಟು ಪ್ರದೇಶದ ತೋಟಗಾರಿಕೆ ಬೆಳೆಗಳು ಹಾಗೂ ಇತರೆ ಕೃಷಿ ಬೆಳೆಗಳಿಗೆ ನೀರು ಹರಿಸಲು ಸಮ್ಮತಿ ಸೂಚಿಸಲಾಗಿದೆ.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ಮಾತನಾಡಿ ಜಲಾಶಯದಲ್ಲಿ 130.05 ಅಡಿ ನೀರು ಸಂಗ್ರಹವಾಗಿದ್ದು, ಈ ಶೇಖರಣೆ ಆಗಿರುವ ನೀರನ್ನು ಕುಡಿಯುವ ನೀರಿಗೆ ಉಳಿಸಿಕೊಳ್ಳುವ ದೃಷ್ಟಿಯಿಂದ ಅಚ್ಚುಕಟ್ಟುದಾರರು ನೀರನ್ನು ಮಿತವಾಗಿ ಉಪಯೋಗಿಸಿ ನೀರು ಪೋಲಾಗದಂತೆ ನೋಡಿಕೊಳ್ಳಬೇಕು. ನಾಲೆಗಳಲ್ಲಿನ ಕಲ್ಲು ಮಣ್ಣು ಕೊಳಚೆಯನ್ನು ನಾಳೆಯಿಂದಲೇ ತ್ವರಿತಗತಿಯಲ್ಲಿ ತೆಗೆದು ನೀರು ಸರಾಗವಾಗಿ ಹರಿಯಲು ಸಂಬಂಧಪಟ್ಟವರು ಸಹಕರಿಸಬೇಕು. ನಿಗದಿತ ಅವಧಿಯಲ್ಲಿ ಸರದಿ ಪ್ರಕಾರ ರೈತರು ತಮ್ಮ ಜಮೀನುಗಳಿಗೆ ನೀರು ಹಾಯಿಸದಿದ್ದಲ್ಲಿ ಪುನಃ ನೀರು ಕೊಡಲಾಗುವುದಿಲ್ಲ. ಯಾವುದೇ ಕಾರಣಕ್ಕೂ ಶಾಂತಿ ಸೌಹಾರ್ಧತೆಗೆ ಭಂಗ ಬರದಂತೆ ನೀರನ್ನು ಬಳಸಿಕೊಳ್ಳಬೇಕು. ಅಹಿತಕರ ಘಟನೆ ನಡೆದರೆ ನೀರನ್ನು ತಕ್ಷಣವೇ ನಿಲ್ಲಿಸಲಾಗುವುದು. ಕಳೆದ ಕೆಲವು ವರ್ಷಗಳಲ್ಲಿ ನೀರಿನ ಬವಣೆ ನೋಡಿರುವ ರೈತರು ನೀರನ್ನು ಮಿತವಾಗಿ ಬಳಸಿಕೊಂಡು ಜಲಾಶಯದಲ್ಲಿ ಹೆಚ್ಚು ನೀರು ಉಳಿಸಿಕೊಳ್ಳಲು ಸಹಕರಿಸಬೇಕು ಎಂದು ಸಭೆಯಲ್ಲಿ ತಿಳಿಸಿದರು.

ಎಡನಾಲ ಮತ್ತು ಬಲನಾಲ ನಾಲೆಗಳ ಮೂಲಕ ಸತತ ಒಂದು ತಿಂಗಳ ಕಾಲ ನೀರು ನಾಲೆಗಳಲ್ಲಿ ಹರಿಯಲಿದೆ. ಮೊದಲ ಎಡನಾಲೆ ಹಿರಿಯೂರು, ಬಬ್ಬೂರು, ಹೊಸಯಳನಾಡು, ಮಲ್ಲೇಣು, ಐನಹಳ್ಳಿ, ಬಿದರಕೆರೆ ಗ್ರಾಮಗಳ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಯಲಿದೆ. ಬಲನಾಲೆಯು ಹಿರಿಯೂರು, ಆದಿವಾಲ, ಪಟ್ರೇಹಳ್ಳಿ, ಆಲೂರು, ಆರನಕಟ್ಟೆ, ಕೂಡ್ಲಹಳ್ಳಿ ಸೇರಿದಂತೆ ಕುಂದಲಗೂರ ಗ್ರಾಮಗಳ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರು ಹರಿಯಲಿದೆ.

ಡ್ಯಾಂ ನಲ್ಲಿ 130 ಅಡಿ ನೀರು: ಕಳೆದ ತಿಂಗಳಷ್ಟೇ ವಾಣಿ ವಿಲಾಸ ಜಲಾಶಯ ಭರ್ತಿಯಾಗಿ 3ನೇ ಬಾರಿಗೆ ಕೋಡಿ ಬಿದ್ದಿತ್ತು. ಮೂರನೇ ಬಾರಿಗೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಜನವರಿ 23ರಂದು ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಸೇರಿದಂತೆ ಅಧಿಕಾರಿಗಳ ವರ್ಗದವರು ವಾಣಿ ವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು. ಈ ಹಿಂದೆ 1935ರಲ್ಲಿ ಮೊದಲ ಬಾರಿಗೆ ಡ್ಯಾಂ ಕೋಡಿ ಬಿದ್ದಿತ್ತು. ತದನಂತರ 2022ರಲ್ಲಿ ಎರಡನೇ ಬಾರಿಗೆ ಡ್ಯಾಂ ಕೋಡಿ ಬಿದ್ದು, ಮೈದುಂಬಿ ಹರಿದಿತ್ತು.

ಹಿರಿಯೂರು ತಾಲ್ಲೂಕಿನಲ್ಲಿ ನೀರಿನ ಅಭಾವ ಉಂಟಾಗಿದ್ದನ್ನು ಮನಗಂಡ ಮೈಸೂರು ಅರಸರು, ನೀರಿನ ಬವಣೆಯನ್ನು ನಿವಾರಿಸಲು 1907ರಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ವಿವಿ ಸಾಗರ ಡ್ಯಾಂ ನಿರ್ಮಾಣ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *