ದೆಹಲಿ: ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳು ಜನರ ಎದುರೇ ಬಹಿರಂಗವಾಗಿದೆ. ಒಬ್ಬರಿಗೊಬ್ಬರು ಮಾತಿನಲ್ಲಿಯೇ ಕಿತ್ತಾಡುತ್ತಿದ್ದಾರೆ. ಅದರಲ್ಲೂ ಈಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವ ಬಿವೈ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕೆಂದು ಯತ್ನಾಳ್ ಬಣ ಪಣ ತೊಟ್ಟಿದೆ. ಈಗ ಹೈಕಮಾಂಡ್ ನಿಂದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬೇರೆ ಅನೌನ್ಸ್ ಆಗಿದೆ. ಹೀಗಾಗಿ ಯತ್ನಾಳ್ ಬಣ ದೆಹಲಿಯಲ್ಲಿ ಬೀಡು ಬಿಟ್ಟಿದೆ.
ರಮೇಶ್ ಜಾರಕಿಹೊಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದು, ವಕ್ಫ್ ಹೋರಾಟದಲ್ಲಿ ಶಬ್ಬಾಸ್ ಗಿರಿಯನ್ನು ಪಡೆದಿದ್ದಾರೆ. ಇದೇ ವೇಳೆ ಮಾಧ್ಯಮದವರ ಜೊತೆಗೂ ಮಾತನಾಡಿ, ಹೈಕಮಾಂಡ್ ನಾಯಕರನ್ನು ನಿನ್ನೆ ರಾತ್ರಿಯೇ ಭೇಟಿಯಾಗಿದ್ದೇವೆ. ಕೊನೆ ಹಂತದಲ್ಲಿ ಇರುವುದರಿಂದ ಮಾಧ್ಯಮದವೆ ಮುಂದೆ ಬಂದು ಹತಾಶ ಮನೋಭಾವದವರು ಮಾತಾಡ್ತಾರಲ್ಲ ಆ ಥರ ಮಾತಾಡುವ ಅವಶ್ಯಕತೆ ಇಲ್ಲ. ಹೈಕಮಾಂಡ್ ನಾಯಕರಿಗೆ ಎಲ್ಲಾ ರೀತಿಯ ಮನವಿ ಮಾಡಿಕೊಂಡಿದ್ದೇವೆ. ಅವರು ಕೊನೆಯ ತೀರ್ಮಾನವನ್ನು ಏನು ತೆಗೆದುಕೊಳ್ಳುತ್ತಾರೆ ಅದನ್ನು ಸ್ವೀಕಾರ ಮಾಡ್ತೇವೆ. ನಿನ್ನೆಯೇ ನಡ್ಡಾ ಅವರನ್ನು ಭೇಟಿ ಮಾಡಿದ್ದೇವೆ ಎಂದಿದ್ದಾರೆ.
ಇದೇ ವೇಳೆ ಹೈಕಮಾಂಡ್ ನಾಯಕರ ಮುಂದೆ ವಿಜಯೇಂದ್ರ ಅವರ ಬಂಡವಾಳವನ್ನು ತೆರೆದಿಡುತ್ತೇವೆ ಎಂದಿದ್ದರಲ್ಲ ತೆರೆದಿಟ್ಟಿದ್ದೀರಾ ಹೇಗೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ನಾಳೆ ಯತ್ನಾಳ್ ಬರ್ತಾರಲ್ಲ ಆಗ ಕೇಳಿ. ನಮಗೆ ಅದರ ಬಗ್ಗೆ ಗೊತ್ತಿಲ್ಲ ಎಂದು ಹೇಳಿ ಮುಂದೆ ನಡೆದಿದ್ದಾರೆ. ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್ ಬಣದಲ್ಲಿಯೇ ಸ್ಟ್ರಾಂಗ್ ಅಭ್ಯರ್ಥಿಯೊಬ್ಬರನ್ನ ಅಧ್ಯಕ್ಷರನ್ನಾಗಿ ಮಾಡುವ ಆಕಾಂಕ್ಷೆಯನ್ನು ಟೀಂ ಹೊಂದಿದೆ. ಚುನಾವಣೆ ನಡೆಯಲಿದ್ದು ಯಾರಾಗ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ ಎಂಬುದನ್ನು ನೋಡಬೇಕಿದೆ.