ಸಬ್ಕಾ ವಿಕಾಸ್ ಅನ್ನು ಸಾಕಾರಗೊಳಿಸುವ ದೂರದೃಷ್ಟಿ ಬಜೆಟ್ : ಸಂಸದ ಗೋವಿಂದ ಎಂ ಕಾರಜೋಳ

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ ಫೆ. 01 : ಇಂದು ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‍ರವರು ಸಬ್ಕಾ ವಿಕಾಸ್ ಅನ್ನು ಸಾಕಾರಗೊಳಿಸುವಲ್ಲಿ ದಾಪುಗಾಲಿಟ್ಟಿರುವ ಬಜೆಟ್‍ನ್ನು ಮಂಡಿಸಿದ್ದಾರೆ. ಈ ಬಜೆಟ್ ಸರ್ವ ವ್ಯಾಪಿ-ಸರ್ವ ಸ್ಪರ್ಶಿಯಾಗಿದೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಪ್ರತಿಕ್ರಿಯೇ ನೀಡಿದ್ದಾರೆ.

ಕೇಂದ್ರದಲ್ಲಿ ವಿತ್ತ ಸಚಿವೆ ನಿರ್ಮಲ ಸೀತರಾಮನ್ ರವರು ಇಂದು ಮಂಡಿಸಿದ 2025-26ನೇ ಸಾಲಿನ ಆಯ್ಯವ್ಯಯದ ಬಗ್ಗೆ ತಮ್ಮ ಅಭೀಪ್ರಾಯವನ್ನು ತಿಳಿಸಿದ ಸಂಸದರು, ಈ ಬಜೆಟ್‍ನಲ್ಲಿ ಬಡವರು, ರೈತರು, ಮಹಿಳೆಯರು, ಯುವಕರು, ಉದ್ದಿಮೆದಾರರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನೊಳಗೊಂಡಂತೆ ಶಿಕ್ಷಣ, ಮತ್ತು ಆರೋಗ್ಯ ಹೀಗೆ ಒಟ್ಟು ಪ್ರಮುಖ 10 ಕ್ಷೇತ್ರಗಳ ಅಭಿವೃದ್ದಿ ಬಗ್ಗೆ ಹೆಚ್ಚು ಗಮನ ಹರಿಸಲಾಗಿದೆ. ಈ ದೇಶದ ಬೆಳವಣಿಗೆಯನ್ನು ಹೆಚ್ಚಿಸಲು, ಮಧ್ಯಮ ವರ್ಗವನ್ನು ಬಲಪಡಿಸುವ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಬಜೆಟ್ ಆಗಿದೆ ಎಂದಿದ್ದಾರೆ.

ಈ ದೇಶದ ಶೇಕಡ 70 ರಷ್ಟು ಜನ ಗ್ರಾಮೀಣ ಭಾಗದಲ್ಲಿದ್ದು ಕೃಷಿ ಚಟುವಟಿಕೆಗಳ ಭಾಗವಾಗಿದ್ದಾರೆ, ಕೃಷಿ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‍ನಡಿ ಸಾಲ ಸೌಲಭ್ಯವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಪ್ರಧಾನಮಂತ್ರಿ ಕೃಷಿ ಧನಧಾನ್ಯ ಯೋಜನೆಯಡಿ 1.7 ಕೋಟಿ ರೈತರಿಗೆ ಶಕ್ತಿ ತುಂಬುವ ಮೂಲಕ ಉತ್ಪಾದಕತೆಯನ್ನು ಹೆಚ್ಚುವಂತೆ ಮಾಡಿದ್ದಾರೆ.ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಹೆಚ್ಚಳ, ಎಲ್ಲಾ ಸರ್ಕಾರಿ ಶಾಲೆಗಳಿಗೆ ಬ್ರಾಡ್‍ಬ್ಯಾಂಡ್ ಸೇವೆ ಒದಗಿಸುವುದಾಗಿ ತಿಳಿಸಿದ್ದಾರೆ, ಬೀದಿ ಬದಿ ವ್ಯಾಪಾರಿಗಳಿಗೆ 30 ಸಾವಿರಗಳ ಕ್ರೆಡಿಟ್ ಕಾರ್ಡ್ ಘೋಷಣೆ ಮಾಡುವ ಮೂಲಕ  ಅತಿ ಸೂಕ್ಷ್ಮ ವಲಯಗಳ ಸಂಗತಿಗಳ ಬಗ್ಗೆಯೂ ಹಣಕಾಸು ಸಚಿವರು ಗಮನ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.

ಎಲ್ಲಾ ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ  ಕ್ಯಾನ್ಸರ್ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸುವ ಮಾತನಾಡಿದ್ದಾರೆ ಹಾಗೂ ಜಲ್ ಜೀವನ್ ಮಿಷನ್ ಯೋಜನೆಯನ್ನು 2028 ರವರೆಗೆ ವಿಸ್ತರಿಸುವುದಾಗಿ ಹೇಳಿದ್ದಾರೆ ಇದು ಸ್ವಾಗತಾರ್ಹ ಕ್ರಮವಾಗಿದೆ.  ವೈಯಕ್ತಿಕ ಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು 12 ಲಕ್ಷಕ್ಕೆ ಏರಿಕೆ ಮಾಡಿರುವುದು ಶ್ಲಾಘನೀಯವಾಗಿದೆ. ರಕ್ಷಣಾ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ಹಂಚಿಕೆ ಮಾಡುವ ಮೂಲಕ ಬಲಿಷ್ಟ ಭಾರತ ನಿರ್ಮಾಣ ಮಾಡುವ ವೇಗಕ್ಕ ಮತ್ತಷ್ಟು ಚುರುಕು ನೀಡಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *