ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಡಿ.04): ಅಪಾರ ಮಳೆಯಿಂದಾಗಿ ರಾಜ್ಯದಲ್ಲಿ ಬೆಳೆ ಹಾನಿಯಾಗಿದ್ದು, ಕೇಂದ್ರ ಸರ್ಕಾರ ಐದು ಸಾವಿರ ಕೋಟಿ ರೂ.ಗಳ ಪರಿಹಾರ ನೀಡಬೇಕೆಂದು ಎಸ್.ಡಿ.ಪಿ.ಐ.ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಡಬ್ಬಲ್ ಎಂಜಿನ್ ಸರ್ಕಾರದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ. ಕಾಮಗಾರಿಗೆ ಶೇ.40 ಪರ್ಸೆಂಟ್ ಕಮೀಷನ್ ನೀಡಬೇಕೆಂದು ಕರ್ನಾಟಕದ ಗುತ್ತಿಗೆದಾರರು ಪ್ರಧಾನಿಗೆ ನೇರವಾಗಿ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರಮೋದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲದಿರುವುದನ್ನು ಗಮನಿಸಿದರೆ ಕೇಂದ್ರ ಮತ್ತು ರಾಜ್ಯ ಬಿಜೆಪಿ.ಸರ್ಕಾರ ಹಗರಣದ ಸರ್ಕಾರ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಆಪಾದಿಸಿದರು.
ಟೆಂಡರ್ ಪಾಸ್ ಆಗುವ ಮೊದಲೇ ಮಂತ್ರಿಗಳು ಐದು ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆಂದು ಗುತ್ತಿಗೆದಾರರ ಸಂಘದವರು ದೂರುತ್ತಿದ್ದಾರೆ. ರಾಜ್ಯ ಬಡತನಲ್ಲಿದೆ. ಪೌಷ್ಠಿಕಾಂಶದ ಕೊರತೆಯಿಂದ ಗರ್ಭಿಣಿಯರು ಹಾಗೂ ಮಕ್ಕಳು ಸಾವನ್ನಪ್ಪುತ್ತಿದ್ದಾರೆ.
ಸರ್ಕಾರಿ ಶಾಲೆ ಮಕ್ಕಳಿಗೆ ರಾಜ್ಯ ಸರ್ಕಾರ ಮಧ್ಯಾಹ್ನದ ಬಿಸಿಯೂಟದ ಜೊತೆ ಮೊಟ್ಟೆ ನೀಡುತ್ತಿರುವುದನ್ನು ಕೆಲವು ಸಂಘಟನೆಗಳು ವಿರೋಧಿಸುತ್ತಿರುವುದಕ್ಕೆ ಸರ್ಕಾರ ಮಣಿಯಬಾರದು. ಆಹಾರ ಅವರವರ ಹಕ್ಕು. ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ನೀಡಲಾಗುತ್ತಿದೆ. ಭೂರಹಿತರಿಗೆ ಸರ್ಕಾರ ಕೂಡಲೆ ಭೂಮಿ ಕೊಡಬೇಕು. ಕೊರೋನಾ ರೂಪಾಂತರಿ ಮತ್ತೆ ನಮ್ಮ ದೇಶಕ್ಕೆ ವ್ಯಾಪಿಸಿರುವುದರಿಂದ ಜನಸಾಮಾನ್ಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಬಜೆಟ್ ನೀಡಬೇಕು.
ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಬೇಕೆಂದು ಮನವಿ ಮಾಡಿದ ಅಪ್ಸರ್ ಕೊಡ್ಲಿಪೇಟೆ ನಮ್ಮ ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ತಿಳಿಸಿದರು.
ಎಸ್.ಡಿ.ಪಿ.ಐ.ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಮಾತನಾಡಿ ನಗರದಲ್ಲಿ ಹತ್ತೊಂಬತ್ತು ಘೋಷಿತ ಕೊಳಗೇರಿಗಳಿದ್ದು, ಅಲ್ಲಿ ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಜನ ವಾಸಿಸುತ್ತಿದ್ದಾರೆ.
ಇದುವರೆವಿಗೂ ಹಕ್ಕುಪತ್ರಗಳನ್ನು ನೀಡಿಲ್ಲ. ಅನೇಕ ಹೋರಾಟಗಳನ್ನು ನಡೆಸಿದ್ದರೂ ಸರ್ಕಾರ ಇನ್ನು ಮೀನಾಮೇಷ ಎಣಿಸುತ್ತಿದೆ. ಇದಕ್ಕೆ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷೆ ಕಾರಣ.
ಚಿತ್ರದುರ್ಗಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ರದ್ದಾಗಿದೆ. ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‍ನಲ್ಲಿ ಹೆಗ್ಗಣಗಳು ಓಡಾಡುತ್ತಿವೆ. ಸಹಜ ಹೆರಿಗೆ ಇಲ್ಲಿ ಆಗುವುದಿಲ್ಲ. ಸಿಸೇರಿಯನ್ ಸಾಮಾನ್ಯವಾಗಿಬಿಟ್ಟಿದೆ. ಇದೇ ಪರಿಸ್ಥಿತಿ ಮುಂದುವೆರೆದರೆ ಬಡವರ ಗತಿಯೇನು ಎಂದು ಖಾರವಾಗಿ ಪ್ರಶ್ನಿಸಿದರು?
ನಗರದಲ್ಲಿರುವ ಪ್ರತಿ ರಾಜಕಾಲುವೆಗಳ ಮೇಲೆ ಕಟ್ಟಡಗಳು ತಲೆ ಎತ್ತಿರುವುದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದ ಪರಿಣಾಮ ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗುತ್ತಿದೆ. ಇಷ್ಟೆಲ್ಲಾ ಸವಾಲುಗಳಿದ್ದರೂ ಚುನಾಯಿತ ಪ್ರತಿನಿಧಿಗಳು ಕಂಡು ಕಾಣದಂತಿರುವುದು ನೋವಿನ ಸಂಗತಿ. ಹಾಗಾಗಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಎಸ್.ಡಿ.ಪಿ.ಐ.ರಾಜ್ಯ ಸಮಿತಿ ಸದಸ್ಯರುಗಳಾದ ಪೊ.ಗಿಯಾಝದ್ದಿನ್, ಅಕ್ಬರ್‍ಅಲಿ, ರಾಜ್ಯ ಉಪಾಧ್ಯಕ್ಷ ಕಮ್ರಾನ್ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಸಾದತ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.