ಸುದ್ದಿಒನ್, ಬೆಂಗಳೂರು : ನಾಗಶೇಖರ್ ನಿರ್ದೇಶನದ “ಸಂಜು ವೆಡ್ಸ್ ಗೀತಾ-2” ಜ.10 ರಂದೇ ಬಿಡುಗಡೆಯಾಗಬೇಕಿತ್ತು. ಆದರೆ 5 ವರ್ಷಗಳ ಹಿಂದೆ ನಾಗಶೇಖರ್ ನಿರ್ದೇಶಿಸಿದ್ದ ತೆಲುಗು ಚಿತ್ರದ ನಿರ್ಮಾಪಕರು ಹೈದರಾಬಾದ್ ಸಿವಿಲ್ ಕೋರ್ಟ್ ನಲ್ಲಿ ನಾಗಶೇಖರ್ ಮೇಲೆ ಕೇಸ್ ಹಾಕಿ ಈ ಚಿತ್ರವನ್ನು ಬಿಡುಗಡೆ ಮಾಡದಂತೆ ಸ್ಟೇ ತಂದಿದ್ದರು. ಚಿತ್ರದ ಪೋಸ್ಟರ್ ನಲ್ಲಿ ನಾಗಶೇಖರ್ ಮೂವೀಸ್ ಅಂತ ಇದ್ದದ್ದೇ ಇದಕ್ಕೆಲ್ಲ ಕಾರಣವಾಗಿತ್ತು. ಬಿಡುಗಡೆಯ ಹಿಂದಿನ ದಿನವಷ್ಟೇ ಸ್ಟೇ ತಂದಿದ್ದರಿಂದ ಸಿನಿಮಾ ಬಿಡುಗಡೆಯಾಗಲಿಲ್ಲ.
ತಕ್ಷಣ ಲಾಯರ್ ಜತೆ ಹೈದರಾಬಾದ್ ಗೆ ಹೊರಟ ನಿರ್ಮಾಪಕ ಕುಮಾರ್ ಈ ಸಿನಿಮಾದ ನಿರ್ಮಾಪಕ ನಾನೊಬ್ಬನೇ. ನಾಗಶೇಖರ್ ನಿರ್ದೇಶಕ ಮಾತ್ರ. ನಮ್ಮ ಮಾಲೀಕತ್ವದ ಪವಿತ್ರ ಇಂಟರ್ ನ್ಯಾಷನಲ್ ಮೂವಿ ಮೇಕರ್ಸ್ ಅಡಿ ಚಿತ್ರ ನಿರ್ಮಿಸಲಾಗಿದೆ ಎಂದು ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆದರೆ ಸ್ಟೇ ವೆಕೇಟ್ ಪ್ರಕ್ರಿಯೆಗೆ ಸ್ವಲ್ಪ ಕಾಲಾವಕಾಶ ಬೇಕು. ಅಲ್ಲಿಯವರೆಗೆ ನಾಲ್ಕೂವರೆ ಕೋಟಿ ಜಾಮೀನು ನೀಡಿ ಎಂದಾಗ, ಅದೇ ಮೊತ್ತದ ತಮ್ಮ ಪ್ರಾಪರ್ಟಿ ಪತ್ರಗಳನ್ನು ಜಾಮೀನು ನೀಡಿ ಪ್ರದರ್ಶನಕ್ಕೆ ಅನುಮತಿ ಪಡೆದುಕೊಂಡು ಬಂದಿದ್ದಾರೆ.
ಸದ್ಯ ಸಂಜು ವೆಡ್ಸ್ ಗೀತಾ 2 ಸಿನಿಮಾಗಿದ್ದ ನಿಷೇಧ ತೆರವುಗೊಳಿಸಲಾಗಿದ್ದು, ಜನವರಿ 17ರಂದು ‘ಸಂಜು ವೆಡ್ಸ್ ಗೀತಾ-2 ಬಿಡುಗಡೆಯಾಗಲಿದೆ. ನಾನು ಈ ಚಿತ್ರದ ನಿರ್ದೇಶಕ ಮಾತ್ರ ಎಂದ ನಾಗಶೇಖರ್, ಇದರ ಹಣಕಾಸಿನ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ. ಈಗ ಗೊಂದಲ ಬಗೆಹರಿದಿದ್ದು, 17 ರಂದು ಚಿತ್ರ ಬಿಡುಗಡೆಯಾಗುತ್ತಿದೆ ಎಂದರು.
ನಿರ್ಮಾಪಕ ಕುಮಾರ್ ಮಾತನಾಡಿ ನಾವು ಥೇಟರ್ ಸೆಟಪ್ ಮಾಡಿಕೊಂಡು ರೆಡಿಯಾದ ಮೇಲೆ, ದಿ.8ರ ಮಧ್ಯಾಹ್ನ 3 ಗಂಟೆಗೆ ನಮಗೆ ಸ್ಟೇ ಆರ್ಡರ್ ಕಾಪಿ ಸಿಗುತ್ತದೆ. ಪ್ರೊಸಿಜರ್ ಪ್ರಕಾರ ಅವರು ಮೊದಲು ನನಗೆ ನೋಟೀಸ್ ಕೊಡಬೇಕಿತ್ತು. ಹಾಗೆ ಮಾಡದೆ ಏಕಾಏಕಿ ಸ್ಟೇ ತಂದಿದ್ದಾರೆ. ಪೋಸ್ಟರ್ ನಲ್ಲಿ ನಾಗಶೇಖರ್ ಮೂವೀಸ್ ಅಂತಿದ್ದರಿಂದ ನಾಗಶೇಖರ್ ಜತೆ ತೆಲುಗು ಚಿತ್ರ ಮಾಡಿ ಸೋಲುಂಡಿದ್ದ ನಿರ್ಮಾಪಕರು, ಒಪ್ಪಂದದ ಪ್ರಕಾರ ನಾಗಶೇಖರ್ ನಮಗೆ ನಾಲ್ಕೂವರೆ ಕೋಟಿ ಕೊಡಬೇಕು,ಈ ಚಿತ್ರಕ್ಕೂ ಅವರೇ ನಿರ್ಮಾಪಕರು ಎಂದುಕೊಂಡು ಸ್ಟೇ ತಂದಿದ್ದರು. ಸ್ಟೇ ವೆಕೇಟ್ ಆಗುವವರೆಗೆ ನನ್ನ 2 ಸೈಟ್ ಗಳನ್ನು ಜಾಮೀನು ಮಾಡಿ ಅನುಮತಿ ತಂದಿದ್ದೇನೆ. ಮುಂದೆ 10 ದಿನ ಅಂದ್ರದಾದ್ಯಂತ ಕೋರ್ಟ್ ರಜಾ ಇದೆ. ಕೆಲವರು ಯೂ ಟ್ಯೂಬ್ ನಲ್ಲಿ ಸಹ ನಿರ್ಮಾಪಕರ ಜತೆ ಜಗಳ, ತಂತ್ರಜ್ಞರಿಗೆ ಬಾಕಿ ಕೊಟ್ಟಿಲ್ಲ ಅಂತೆಲ್ಲ ಬರೆದಿದ್ದಾರೆ. ಸತ್ಯಾಂಶ ತಿಳಿಯದೆ ಏನೇನೋ ಬರೆಯಬೇಡಿ. ಏನಿದ್ದರೂ ಸಂಬಂಧ ಪಟ್ಟವರನ್ನು ಸಂಪರ್ಕಿಸಿ ಎಂದು ಹೇಳಿದರು.