ಅಂತರ್ಜಾತಿ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ

suddionenews
2 Min Read

ವಿಜಯನಗರ, ಡಿಸೆಂಬರ್ 12: ಅಂತರ್ಜಾತಿ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು. ಇದರಿಂದಾಗಿ ಸಮಾಜದಲ್ಲಿನ ಜಾತಿ ವ್ಯವಸ್ಥೆ ಅಳಿದು ಸಮಸಮಾಜ ನಿರ್ಮಾಣ ಸಾದ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ವಿಜಯನಗರ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ *ಸರ್ವ ಧರ್ಮ ಗಳ ಸಾಮೂಹಿಕ ವಿವಾಹಗಳ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದರು

ಸರ್ವಧರ್ಮಗಳ ಸಾಮೂಹಿಕ ವಿವಾಹಗಳ ಸಮಾರಂಭದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ 23 ನವವಧುವರ ಜೋಡಿಗಳಿಗೆ ಶುಭ ಕೋರಿದ ಮುಖ್ಯಮಂತ್ರಿಯವರು, ವಿವಾಹದ ಖರ್ಚುವೆಚ್ಚಗಳನ್ನು ಭರಿಸಲಾಗದ ಬಡಕುಟುಂಬಗಳಿಗೆ ಸಾಮೂಹಿ ವಿವಾಹ ವರದಾನವಾಗಿದೆ. ಸರಳ ಶೈಲಿಯಲ್ಲಿ ವಿವಾಹವಾಗುವ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಕೆಳವರ್ಗದಲ್ಲಿ ಹುಟ್ಟಿದ ಮಾತ್ರಕ್ಕೆ ಬಡವರಾಗಿಯೇ ಉಳಿಯಬೇಕೆಂಬ ಭಾವನೆ ತಪ್ಪು. ಜಾತ್ಯಾತೀತದ ತತ್ವವನ್ನು ನಮ್ಮ ಸಂವಿಧಾನ ಬೋಧಿಸಿದೆ. ಇದೇ ಆಶಯವನ್ನು ವ್ಯಕ್ತಪಡಿಸಿದ ಬಸವಣ್ಣವರು, ಜಾತಿಆಧಾರಿತ ಸಮಾಜ ವ್ಯವಸ್ಥೆ ಸಾಧುವಲ್ಲ ಎಂದು ಪ್ರತಿಪಾದಿಸಿದ್ದರು. ‘ದಯವೇ ಧರ್ಮದ ಮೂಲವಯ್ಯ’ ಎಂದು ನುಡಿದು, ಉದಾತ್ತ ತತ್ವವನ್ನು ಬೋಧಿಸಿದ ಬಸವಣ್ಣನವರನ್ನು ಸರ್ಕಾರ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದೆ ಎಂದರು.

ಮನುಷ್ಯ ವಿಶ್ವಮಾನವನಾಗಬೇಕು :

ಮನುಷ್ಯ ಹುಟ್ಟುವಾಗ ವಿಶ್ವಮಾನವನಾಗಿದ್ದು, ಜಾತಿಧರ್ಮಗಳ ಬಂಧನದದಲ್ಲಿ ಸಿಲುಕಿ ಅಲ್ಪಮಾನವನಾಗುತ್ತಾನೆ. ಆದ್ದರಿಂದ ವಿಶ್ವಮಾನವರಾಗುವ ಮೂಲಕ ಸಮಾನಕ್ಕೆ ಕೊಡುಗೆ ನೀಡಬೇಕಾಗಿದೆ. ಬಸವಣ್ಣನವರ ಕಾಲದಲ್ಲಿಯೇ ಅಂತರಜಾತಿ ವಿವಾಹ ಪದ್ಧತಿ ಪ್ರಚಲಿತವಾಗಿತ್ತು. ಇತರ ಧರ್ಮಗಳನ್ನೂ ಗೌರವಿಸುವ ವ್ಯವಸ್ಥೆ ಸಮಾಜದಲ್ಲಿರಬೇಕು. ಚಲನೆರಹಿತವಾದ ಜಾತಿವ್ಯವಸ್ಥೆಯಲ್ಲಿ ನಾವಿದ್ದೇವೆ. ಆರ್ಥಿಕ ಹಾಗೂ ಸಾಮಾಜಿಕ ಸ್ವಾವಲಂಬನೆಯಿಂದ ಚಲನೆಯಿಲ್ಲದ ಸಮಾಜಕ್ಕೆ ಜೀವಬರುತ್ತದೆ ಎಂದರು.

ಗ್ಯಾರಂಟಿ ಯೋಜನೆಗಳು :

ಹೆಣ್ಣುಮಕ್ಕಳಿಗೆ ಶಕ್ತಿತುಂಬುವ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿದೆ. ಇಂದು ವಿವಾಹ ಬಂಧನಕ್ಕೊಳಗಾದ ಮಹಿಳೆಯರಿಗೂ ಸರ್ಕಾರದ ಗ್ಯಾರಂಟಿಗಳು ತಲುಪವಂತಾಗಬೇಕು ಎಂದರು.

ಸಂವಿಧಾನದ ಸಮಾನ ಅವಕಾಶಗಳನ್ನು ನೀಡಿದೆ :
ಆರ್ಥಿಕವಾಗಿ ದುರ್ಬಲರಾಗಿರುವ ಜನರ ಕೊಂಡುಕೊಳ್ಳುವ ಶಕ್ತಿ ಹೆಚ್ಚಬೇಕು. ಅಂತೆಯೇ ಶ್ರೀಮಂತವರ್ಗದವರೂ ಕೂಡ ಬಡವರ ಸಹಾಯಕ್ಕೆ ಮುಂದಾಗಬೇಕು ಹಾಗೂ ಸಮಾಜದ ಋಣ ತೀರಿಸಲು ಪ್ರಯತ್ನಿಸಬೇಕೆಂದು ಮುಖ್ಯಮಂತ್ರಿಗಳು ಕರೆ ನೀಡಿದರು. ಡಾ. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ , ಎಲ್ಲರಿಗೂ ಸಮಾನ ಹಕ್ಕು ಹಾಗೂ ಸಮಾನ ಅವಕಾಶಗಳನ್ನು ನೀಡಿದೆ. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಅರಿತಿರಬೇಕು. ಸಂವಿಧಾನ ನೀಡಿರುವ ಹಕ್ಕು ಬಾಧ್ಯತೆಗಳಬಗ್ಗೆ ಅರಿವು ಪಡೆದು, ಜವಾಬ್ದಾರಿಯುತ ನಾಗರಿಕನಾಗುವುದು ಅವಶ್ಯವಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *