ಮೈಸೂರು: ಕಳೆದ ಕೆಲವು ತಿಂಗಳುಗಳಿಂದಾನೂ ಜೆಡಿಎಸ್ ರಾಜ್ಯಾಧ್ಯಕ್ಷರನ್ನು ಬದಲಾಯಿಸುವ ಚರ್ಚೆ ನಡೆಯುತ್ತಿದೆ. ಸಿ.ಎಂ.ಇಬ್ರಾಹಿಂ ಈ ಮೊದಲು ರಾಜ್ಯಾಧ್ಯಕ್ಷರಾಗಿದ್ದರು. ಆದರೆ ಒಂದಷ್ಟು ವಾಗ್ವಾದಗಳು ನಡೆದ ಮೇಲೆ ರಾಜ್ಯಾಧ್ಯಕ್ಷರನ್ನು ದೇವೇಗೌಡರು ಬದಲಾಯಿಸಿದ್ದರು. ಕುಮಾರಸ್ವಾಮಿ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಲಾಗಿತ್ತು. ಇದೀಗ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಲಾಗುತ್ತಿದೆ ಎನ್ನಲಾಗಿದೆ. ಈ ವಿಚಾರಕ್ಕೆ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿದೆ.
ಈ ಸಂಬಂಧ ಚರ್ಚೆ ಮಾಡುವುದಕ್ಕೆ ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ಆದರೆ ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದು, ನಾನು ಸಭೆಯಲ್ಲಿ ಭಾಗಿಯಾಗಲ್ಲ ಎಂದೇ ಹೇಳಿದ್ದಾರೆ. ಸಭೆಯಲ್ಲಿ ಭಾಗಿಯಾಗಲ್ಲ ಎಂದು ಹೇಳುವ ಮೂಲಕ ಅಚ್ಚರಿ ಉಂಟು ಮಾಡಿದ್ದಾರೆ.
‘ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆಯ ಕುರಿತು ನಡೆಯುವ ಸಭೆಯಲ್ಲಿ ನಾನು ಭಾಗಿಯಾಗುವುದಿಲ್ಲ. ಹೆಚ್.ಡಿ ದೇವೇಗೌಡ ಅವರು 92 ವರ್ಷದ ಹಿರಿಯ ಮುತ್ಸದ್ಧಿಯಾಗಿದ್ದಾರೆ. ಅವರು ಜಯಪ್ರಕಾಶ್ ನಾರಾಯಣ ಅವರ ಜೊತೆಗೆ ಸೇರಿದ ಕಟ್ಟಿದ ಪಕ್ಷ ಇದು. ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡ ಎರಡೆರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಪಾರ ಅನುಭವ ಪಡೆದುಕೊಂಡಿದ್ದಾರೆ. ಅವರಿಬ್ಬರೇ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ. ನಿಖಿಲ್ ಕುಮಾರಸ್ವಾಮಿಯ ಆಪ್ತ ಸ್ನೇಹಿತ ನನ್ನ ಪುತ್ರ. ನಿಖಿಲ್ ಅವರೇ ರಾಜ್ಯಾಧ್ಯಕ್ಷನಾಗಲೀ ಎಂದರೆ ಅದರಲ್ಲಿ ತಪ್ಪೇನಯ ಬಂತು ಎಂದು ಕೇಳಿದ್ದಾರೆ. ನಾನು ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ದಿಗೆ ಓಡಾಡುತ್ತಿದ್ದೇನೆ. ಆದ್ದರಿಂದ ಪಕ್ಷದ ಸಂಘಟನೆ ಹಾಗೂ ಸಭೆಗೆ ಹಾಜರಾಗಲು ಆಗುತ್ತಿಲ್ಲ ಎಂದಿದ್ದಾರೆ.