ಸುದ್ದಿಒನ್, ಚಿತ್ರದುರ್ಗ, ಜನವರಿ. 11: ಆಧುನಿಕ ಯುಗದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಸವಾಲಾಗಿದೆ. ಕೂಡಿಟ್ಟ ಹಣವನ್ನು ಕಾಯಿಲೆಗಾಗಿ ಖರ್ಚು ಮಾಡಿರುವ ಅನೇಕ ಸಂಗತಿಗಳು ನಮ್ಮ ಕಣ್ಣೆದುರಿಗಿದೆ. ಮಾನಸಿಕ ಅಸ್ವಸ್ಥತೆಗೆ ಯೋಗ ದಿವ್ಯೌಷಧವಾಗಿದೆ. ಯೋಗವನ್ನು ಎಲ್ಲರೂ ಮಾಡಬಲ್ಲರು ಆದರೆ ಯೋಗ ಚಿಕಿತ್ಸಕ ಪದ್ಧತಿಯನ್ನು ಪರಿಚಯಿಸುವ ಕಾರ್ಯ ನಡೆಯಬೇಕಿದೆ ಎಂದು ರಂಗ ನಿರ್ದೇಶಕ ಕೆಪಿಎಮ್ ಗಣೇಶಯ್ಯ ಅಭಿಪ್ರಾಯಪಟ್ಟರು.
ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಶುಕ್ರವಾರ ಸಂಜೆ ನಗರದ ವಿಪಿ ಬಡಾವಣೆಯಲ್ಲಿರುವ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯದರ್ಶಿ ಹಾಗೂ ಯೋಗ ಚಿಕಿತ್ಸಕ ಎಂ.ಬಿ ಮುರುಳಿ ಸಾರಥ್ಯದ ಯೋಗ ಚಿಕಿತ್ಸಕ ತರಬೇತಿಯ ತರಗತಿಗೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ಅಲ್ಪಾವಧಿ ಯೋಗ ತರಬೇತಿ ಪಡೆದವರು ಯೋಗ ಶಿಕ್ಷಕರಾಗುತ್ತಾರೆ, ಆದರೆ ಪೂರ್ಣ ಪ್ರಮಾಣದಲ್ಲಿ ಮಾನಸಿಕ ಮತ್ತು ದೈಹಿಕ ಯೋಗ ತರಬೇತಿ ನೀಡುವಲ್ಲಿ ವಿಫಲರಾಗಿರುತ್ತಾರೆ. ಧ್ಯಾನ, ಆಸನ, ಪ್ರಾಣಾಯಾಮ ಸೇರಿದಂತೆ ನೇತಿ, ದೌತಿ, ನೌಲಿ, ಬಸ್ತಿ, ಕಪಾಲಬಾತಿ ಮತ್ತು ತ್ರಾಟಕದಂತಹ ಷಟ್ ಕ್ರಿಯೆಗಳ ತರಬೇತಿ ನೀಡಬೇಕಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕ ಜ.ರಾ.ನಾಗೇಶ್ ಮಾತನಾಡಿ ಯೋಗವು ಶಿಸ್ತು, ಏಕಾಗ್ರತೆ ಮತ್ತು ಜೀವನ ಬದ್ಧತೆಯನ್ನು ಕಲಿಸುತ್ತದೆ ಎಂದರು.
ಚಳ್ಳಕೆರೆ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆರ್.ಎಸ್.ಉಮೇಶ್ ಮಾತನಾಡಿ ಪ್ರಸ್ತುತ ದೈನಂದಿನ ಕಾರ್ಯದ ಒತ್ತಡಗಳಿಂದಾಗಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡದೆ ದುಶ್ಚಟಗಳಿಗೆ ಬಲಿಯಾಗಿ ದೇಹಾರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಪುಟ್ಟ ಮಕ್ಕಳೂ ಕೂಡ ಹೃದಯಾಘಾತ ಮತ್ತು ಮಾನಸಿಕ ಅಸ್ಥಿರತೆಗೆ ಒಳಗಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಪ್ರಾಚೀನ ಕಾಲದಿಂದಲೂ ಪ್ರಚಲಿತವಾಗಿರುವ ಯೋಗ ಚಿಕಿತ್ಸಾ ಪದ್ಧತಿಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಬಾಲವೃದ್ಧರಾಗಿ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಬಿ ಮುರುಳಿ, ಮನೋಹರ್, ಸಂಸ್ಥೆಯ ನಿರ್ದೇಶಕಿ ಸುನಿತಾ ಎಸ್.ಕೆ, ಮಾನಸ ಸಂತೋಷ್ ಮತ್ತಿತರ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.