ಮತಗಳ ಮಾರಾಟದಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯ : ಪ್ರೊ.ಸಿ.ಕೆ.ಮಹೇಶ್

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ. 10 : ಎಲ್ಲಿಯವರೆಗೂ ಮತಗಳ ಮಾರಾಟವಾಗುತ್ತದೆಯೋ ಅಲ್ಲಿಯತನ ಸಂವಿಧಾನ, ಪ್ರಜಾಪ್ರಭುತ್ವವನ್ನು ಅಪಾಯದಿಂದ ರಕ್ಷಿಸಲು ಸಾಧ್ಯವಿಲ್ಲ ಎಂದು ದಲಿತ ಚಿಂತಕ ಪ್ರೊ.ಸಿ.ಕೆ.ಮಹೇಶ್ ಅಭಿಪ್ರಾಯಪಟ್ಟರು.

ಮಾನವ ಬಂಧುತ್ವ ವೇದಿಕೆ ಹತ್ತನೆ ವರ್ಷದ ಅಂಗವಾಗಿ ಫೆ.2 ರಂದು ದಾವಣಗೆರೆಯಲ್ಲಿ ನಡೆಯುವ ರಾಜ್ಯ ಮಟ್ಟದ ಸಮ್ಮೇಳನದ ಅಂಗವಾಗಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ದೊಡ್ಡಸಂಖ್ಯೆಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು, ಅಲ್ಪಸಂಖ್ಯಾತರು ತಮ್ಮ ಅಮೂಲ್ಯವಾದ ಮತಗಳ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಮುಂದೊಂದು ದಿನ ನಮ್ಮ ದೇಶ ಬ್ರಾಹ್ಮಣ್ಯರ ಮತ್ತು ಬನಿಯಾಗಳ ಆಳ್ವಿಕೆಗೆ ಒಳಪಡುವುದರಲ್ಲಿ ಸಂಶಯವಿಲ್ಲ. ಹಾಗಾಗಿ ದೊಡ್ಡ ಮತಾಂದೋಲನವಾಗಬೇಕಿದೆ.
ಬುದ್ದನ ಆಲೋಚನೆಗಳು, ಸಂವಿಧಾನ ಒಂದಕ್ಕೊಂದು ಪೂರಕವಾಗಿವೆ ಎನ್ನುವುದು ಡಾ.ಬಿ.ಆರ್.ಅಂಬೇಡ್ಕರ್‍ರವರಿಗೆ ಗೊತ್ತಿದ್ದರಿಂದ ಬುದ್ದನ ಆಲೋಚನೆಯನ್ನು ಪ್ರಧಾನವಾಗಿಟ್ಟುಕೊಂಡು ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆಂದರು.

ಬ್ರಾಹ್ಮಣ್ಯರು, ಶ್ರೀಮಂತರ ವಿರುದ್ದ ಡಾ.ಬಿ.ಆರ್.ಅಂಬೇಡ್ಕರ್ ಯಾವಾಗಲೂ ಮಾತನಾಡುತ್ತಿದ್ದರು. ಈಗಲಾದರೂ ಬಹುಸಂಖ್ಯಾತರು ಎಚ್ಚೆತ್ತುಕೊಂಡು ತಮಗಿರುವ ಮತಗಳ ಶಕ್ತಿಯನ್ನು ಚುನಾವಣೆಯಲ್ಲಿ ಸರಿಯಾಗಿ ಚಲಾಯಿಸದಿದ್ದರೆ ಸಂವಿಧಾನ ಹೋಗಿ ಮನುಧರ್ಮ ಶಾಸ್ತ್ರ ಅಧಿಕಾರಕ್ಕೆ ಬರುವುದು ಖಂಡಿತ. ಅದಕ್ಕಾಗಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಬೇಕಿದೆ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯರಾದ ಡಾ.ವಿ.ಬಸವರಾಜ್ ಮಾತನಾಡಿ ಮಾನವ ಬಂಧುತ್ವ ವೇದಿಕೆ ಶೋಷಿತ ಸಮುದಾಯಗಳ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವ ಕೆಲಸ ಮಾಡುವುದರ ಜೊತೆಗೆ ಸಾಮರಸ್ಯವನ್ನು ಕಾಪಾಡಿಕೊಂಡು ಬರಬೇಕು. ಯಾವುದೇ ಒಂದು ವ್ಯಕ್ತಿ, ಜನಾಂಗವನ್ನು ಓಲೈಸುವ ಕೆಲಸ ಮಾಡಬಾರದು. ತಾಲ್ಲೂಕು, ಜಿಲ್ಲೆ
ರಾಜ್ಯದ ಗಡಿಯನ್ನು ದಾಟಿ ರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿ ಸಂಘಟನೆಯಾಗಬೇಕೆಂದರು.

ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿರುವ ಎಲ್ಲಾ ಪ್ರಗತಿಪರರನ್ನು ಒಂದು ವೇದಿಕೆಯಡಿ ಕರೆತರುವ ಪ್ರಯತ್ನ ಮಾನವ ಬಂಧುತ್ವ ವೇದಿಕೆಯಿಂದ ಆಗಬೇಕಿದೆ. ಶೋಷಿತ ಸಮುದಾಯಗಳ, ಬುದ್ದಿಜೀವಿಗಳ, ಬರಹಗಾರರ, ಸಾಂಸ್ಕøತಿಕ ಕಲಾವಿದರು, ಅಧ್ಯಯನಶೀಲತೆಯಲ್ಲಿ ಪ್ರಬುದ್ದತೆಯುಳ್ಳವರ ಸಮಾವೇಶವಾಗಬೇಕು. ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಅಪಾಯ ಕಂಡು ಬಂದಲ್ಲಿ ಪ್ರತಿಭಟಿಸಿ ಪ್ರತಿಕ್ರಿಯೆ ನೀಡಬೇಕು. ಇಲ್ಲವಾದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯಾತರು, ತೊಂದರೆಗೆ ಸಿಲುಕಬೇಕಾಗುತ್ತದೆನ್ನುವುದನ್ನು ಮಾನವ ಬಂಧುತ್ವ ವೇದಿಕೆ ಮನಗಂಡು ಎಚ್ಚರಿಕೆಯ ನಡೆ ಇಡಬೇಕಿದೆ ಎಂದು ಸಲಹೆ ನೀಡಿದರು.

ಸೃಷ್ಠಿಸಾಗರ ಪ್ರಕಾಶನ ಮುಖ್ಯಸ್ಥ ಮೇಘಗಂಗಾಧರನಾಯ್ಕ, ಹೆಚ್.ಅಂಜಿನಪ್ಪ, ಶಿವಕುಮಾರ್, ಬಸವರಾಜ್, ಧಮ್ಮ ಕೇಂದ್ರದ ಆರ್.ವಿಶ್ವಸಾಗರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *