ಬೆಂಗಳೂರು: ಕೊರೆಯುವ ಚಳಿಯನ್ನು ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು ಕಳೆದ ಮೂರ್ನಾಲ್ಕು ದಿನದಿಂದ ನಡೆಸಿದ ಹೋರಾಟಕ್ಕೆ ಕಡೆಗೂ ಜಯ ಸಿಕ್ಕಿದೆ. ಗೌರವ ಧನ ಹೆಚ್ಚಳಕ್ಕಾಗಿ ಮಾಡಿದ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಅಸ್ತು ಎಂದಿದೆ. ಪ್ರತಿ ತಿಂಗಳು 10 ಸಾವಿರ ರೂಪಾಯಿ ಗೌರವ ಧನ ನೀಡಲು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಕಾರ್ಯಕರ್ತೆಯರ ನಿಯೋಗ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ಆಶಾ ಕಾರ್ಯಕರ್ತೆಯರು ನಮಗೆ ಪ್ರತಿ ತಿಂಗಳು 15 ಸಾವಿರ ಗೌರವ ಧನ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಸರ್ಕಾರ ಅವರ ಬೇಡಿಕೆಯನ್ನು ಪರಿಶೀಲನೆ ಮಾಡಿದ್ದು, ಕೂಡಲೇ ಆಶಾ ಕಾರ್ಯಕರ್ತೆಯರ ಗೌರವ ಧನವನ್ನು 10 ಸಾವಿರಕ್ಕೆ ಹೆಚ್ಚಿಸಲು ಸಿಎಂ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಆದೇಶಕ್ಕೆ ಆಶಾ ಕಾರ್ಯಕರ್ತೆಯರು ಸಹ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ತೆರೆ ಬಿದ್ದಿದೆ.
ಗೌರವ ಧನ ಸೇರಿದಂತೆ ಹಲವು ಬೇಡಿಕೆಗಳನ್ನು ಆಶಾ ಕಾರ್ಯಕರ್ತೆಯರು ಸರ್ಕಾರದ ಮುಂದಿಟ್ಟಿದ್ದರು. ಆ ಬೇಡಿಕೆಗಳನ್ನು ಪರಿಶೀಲನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ಧರಣಿಯ ಹಾದಿ ಹಿಡಿದಿದ್ದರು. ಮೊದಲೇ ಮೈ ಕೊರೆಯುವ ಚಳಿ. ಯಾವುದನ್ನು ಲೆಕ್ಕಿಸದೆ ಧರಣಿ ಕೂತಿದ್ದ ಆಶಾ ಕಾರ್ಯಕರ್ತೆಯರ ಸಂಧಾನಕ್ಕೆ ಸರ್ಕಾರದ ಪ್ರತಿನಿಧಿಗಳು ಪ್ರಯತ್ನಿಸಿದ್ದರು. ಆದರೆ ಅದು ವಿಫಲವಾಗಿತ್ತು. ಬಳಿಕ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಮುಂದೆ ಬಂದು ಮಾತುಕಥೆ ನಡೆಸಿ, ಸಂಧಾನ ಯಶಸ್ವಿ ಮಾಡಿದ್ದಾರೆ.