ಇಂದು ನಾಡಿನೆಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ. ಆದರೆ ಇದರ ನಡುವೆಯೂ ಹೆಚ್ಚು ಸುದ್ದಿಯಾಗುತ್ತಿರುವುದು ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತ್ಯಂಗೀರಾ ದೇವಾಲಯದಲ್ಲಿ ಮಾಡಿಸಿದ ಪೂಜೆ ವಿಚಾರ. ಡಿಸಿಎಂ ಡಿಕೆ ಶಿವಕುಮಾರ್ ದಂಪತಿ ತಮಿಳುನಾಡಿನಲ್ಲಿರುವ ಪ್ರತ್ಯಂಗೀರಾ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಮಾಡಿಸಿದ್ದಾರೆ. ಈ ವಿಚಾರಕ್ಕೆ ಶತ್ರು ಸಂಹಾರ ಚರ್ಚೆ ಶುರುವಾಗಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಎಲ್ಲರನ್ನೂ ದೇವರೇ ಕಾಪಾಡಬೇಕು. ಅಧಿಕಾರ ಬೇಕು ಅಂತ ಅಲ್ಲಿ, ಮತ್ತೆಲ್ಲೋ ಶತ್ರು ನಾಶಕ್ಕೆ ಹೋಗುವುದು. ಅಲ್ಲೂ ಕೂಡ ದೇವರನ್ನ ಕೇಳುವುದು. ಅಧಿಕಾರ ಕೊಡಪ್ಪ, ಶತ್ರು ನಾಶ ಮಾಡಪ್ಪ ಅಂತಾನೆ ಎಂದಿದ್ದಾರೆ.
ಕುಮಾರಸ್ವಾಮಿ ಮಾತಿಗೆ ತಿರುಗೇಟು ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಹೌದ್ರಿ ನಾನು ದಿನಾ ಪೂಜೆ ಮಾಡ್ತಾ ಇರ್ತೇನೆ. ಪ್ರತಿ ದಿನ ಕೂಡ ನನಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡುತ್ತಾ ಇರುತ್ತೇನೆ. ನನಗೆ ಯಾರಾದರೂ ತೊಂದರೆ ಕೊಡ್ತಾರೆ, ಅವರಿಂದ ರಕ್ಷಣೆ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ. ಇದರಲ್ಲಿ ಯಾವುದೇ ಮುಚ್ಚು ಮರೆ, ಏನಿಲ್ಲ. ದಿನಾ ದೇವರನ್ನು ನೋಡುತ್ತಾ ಇರುತ್ತೇನೆ, ಹೋನ ಹವನಗಳನ್ನ ಮಾಡಿಸುತ್ತಾ ಇರುತ್ತೇನೆ. ನನ್ನ ಮನಸ್ಸಿನ ಸಮಾಧಾನಕ್ಕೆ ಪೂಜೆ ಮಾಡಿಸುತ್ತೇನೆ. ದೇವರ ಮೇಲೆ, ಧರ್ಮದ ಮೇಲೆ ನಂಬಿಕೆ ಇದೆ. ಪ್ರತಿ ದಿನ ದೇವರಿಗೆ ನಮಸ್ಕಾರ ಮಾಡದೆ ಎಲ್ಲಿಯೂ ಹೋಗಲ್ಲ ಎಂದಿದ್ದಾರೆ.
ಪ್ರತ್ಯಂಗೀರಾ ದೇವಾಲಯದಲ್ಲಿ ಸಾಮಾನ್ಯವಾಗಿ ಶತ್ರುಗಳ ಸಂಹಾರಕ್ಕಾಗಿ ಪೂಜೆ ಮಾಡಲಾಗುತ್ತದೆ. ತಮಿಳುನಾಡಿನ ಕುಂಭಕೋಣಂನಲ್ಲಿ ಈ ದೇವಾಲಯವಿದೆ. ಹಲವು ವಿಶಿಷ್ಠ ಶಕ್ತಿಗಳಿಗೆ ಈ ದೇವಾಲಯ ಖ್ಯಾತಿ ಪಡೆದಿದೆ.