ಈಗ ಸದ್ಯ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ. ಇದು ರಾಜ್ಯದ ಜನತೆಗೆ ಖುಷಿ ಕೊಡುವ ವಿಚಾರವೇ ಸರಿ. ರಕ್ತ ಚರಿತ್ರೆ ಸಾರಿದ್ದವರೇ ಸಿಎಂ ಸಿದ್ದರಾಮಯ್ಯ ಅವರ ಮುಂದೆ ಶಾಂತಿ ಮಂತ್ರ ಜಪಿಸಿದ್ದಾರೆ. ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿ ಸಿಎಂ ಗೃಹ ಕಚೇರಿಯಲ್ಲಿ ಸಿಎಂ ಮುಂದೆ ನಕ್ಸಲರು ಶರಣಾಗಿರುವುದು. ನಿನ್ನೆಯಷ್ಟೇ ಶರಣಾದ ಆರು ಜನ ನಕ್ಸಲರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಮುಂಡಗಾರು ಲತಾ, ಸುಂದರಿ, ವನಜಾಕ್ಷಿ, ಜಿಶಾ, ವಸಂತ್, ಮಾರೆಪ್ಪ ಅವರನ್ನು ಇಂದು ಚಿಕ್ಕಮಗಳೂರು ಡಿವೈಎಸ್ಪಿ ಬಾಲಾಜಿ ಸಿಂಗ್ ಎನ್ಐಎ ವಿಶೇಷ ಕೋರ್ಟ್ ನ ನ್ಯಾಯಾಧೀಶರಾದ ಗಂಗಾಧರ್ ಮುಂದೆ ಹಾಜರು ಪಡಿಸಿದ್ದರು. ಕೋರ್ಟ್ ಆ ಆರು ನಕ್ಸಲರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಸಿಟಿ ಸಿವಿಲ್ ಕೋರ್ಟ್ ಸಂಕೀರ್ಣದ ಎನ್ಐಎ ಕೋರ್ಟ್ ಗೆ ಹಾಜರು ಪಡಿಸಲಾಗಿತ್ತು. ನಕ್ಸಲರನ್ನು ಕೋರ್ಟ್ ಗೆ ಹಾಜರುಪಡಿಸಿದ ಹಿನ್ನೆಲೆಯಲ್ಲಿ ಖುದ್ದು ಡಿಸಿಪಿ ಹೆಚ್.ಟಿ. ಶೇಖರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವಹಿಸಲಾಗಿತ್ತು.
ಇನ್ನು ನಕ್ಸಲರನ್ನು ಕೋರ್ಟ್ ಗೆ ಹಾಜರುಪಡಿಸುವುದಕ್ಕೂ ಮುನ್ನ ಮೆಡಿಕಲ್ ಟೆಸ್ಟ್ ಕೂಡ ಮಾಡಿಸಲಾಗಿದೆ. ಅವರ ಆರೋಗ್ಯದ ಸ್ಥಿತಿಗತಿಯನ್ನು ಪರಿಶೀಲಿಸಿದ್ದಾರೆ. ಬಳಿಕ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಸದ್ಯ ಆರು ನಕ್ಸಲರು ನ್ಯಾಯಾಂಗ ಬಂಧನದಲ್ಲಿದ್ದಾರೆ. ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಜಿ ಪರಮೇಶ್ವರ್ ಸಮ್ಮುಖದಲ್ಲಿ ಆರು ಜನ ನಕ್ಸಲರು ಶರಣಾದರು. ಬಳಿಕ ಅವರನ್ನು ಚಿಕ್ಕಮಗಳೂರಿನ ಪೊಲೀಸರಿಗೆ ಒಪ್ಪಿಸಲಾಗಿದ್ದು, ಇಂದು ಕೋರ್ಟ್ ನಲ್ಲಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.