ಬೆಂಗಳೂರು: ಅಂತು ಕರ್ನಾಟಕ ನಕ್ಸಲ್ ಮುಕ್ತ ಆಗಿದೆ ಎಂದೇ ಇಂದಿಗೆ ವ್ಯಾಖ್ಯಾನಿಸಲಾಗಿದೆ. ಆರು ಜನ ನಕ್ಸಲರನ್ನು ಮುಖ್ಯವಾಗಿನಿಗೆ ತರುವಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆಯೇ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ನಕ್ಸಲರು ಶರಣಾಗತರಾಗಬೇಕಾಗಿತ್ತು. ಆದರೆ ಕಡೆ ಗಳಿಗೆಯಲ್ಲಿ ಮನಸ್ಸು ಬದಲಿಸಿದ ನಕ್ಸಲರು, ನಾವೂ ಸಿಎಂ ಸಿದ್ದರಾಮಯ್ಯ ಅವರ ಮುಂದೆಯೇ ಶರಣಾಗುತ್ತೀವಿ ಎಂದು ಹೇಳಿದ್ದರು. ಅದಕ್ಕೆ ಸಿದ್ದರಾಮಯ್ಯ ಅವರು ಕೂಡ ಒಪ್ಪಿ, ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸರೆಂಡರ್ ಆಗಲು ತಿಳಿಸಿದ್ದರು.
ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬರುವ ತನಕ ಪೊಲೀಸ್ ಬಂದೋಬಸ್ತ್ ನಲ್ಲಿ ಕರೆದುಕೊಂಡು ಬರಲಾಗಿತ್ತು. ಈ ಮೂಲಕ ಸಂಜೆ ವೇಳೆ ಸಿಎಂ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಇಂದು ಶರಣಾಗಿದ್ದಾರೆ. ನಾಲ್ಕು ರಾಜ್ಯಗಳಿಗೆ ಬೇಕಾದ ಮೋಸ್ಟ್ ವಾಂಟೆಡ್ ನಕ್ಸಲರು ಇವರಾಗಿದ್ದಾರೆ. ವ್ಯವಸ್ಥೆಯ ವಿರುದ್ಧ ಸಿಡಿದೆದ್ದು, ಬಂದೂಕು ಹಿಡಿದು, ರಜ್ತ ಚರಿತ್ರೆ ಬರೆದಿದ್ದವರು ಶಾಂತಿ ಮಂತ್ರ ಘೋಷಿಸಿದ್ದಾರೆ. ನಾಲ್ಕು ದಶಕಗಳ ಬಳಿಕ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ.
ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ. ಪರಮೇಶ್ವರ್ ಎದುರು ಶರಣಾಗಿದ್ದಾರೆ. 24 ವರ್ಷಗಳ ಬಳಿಕ 6 ನಕ್ಸಲರು ಶರಣಾಗಿದ್ದು ಕರ್ನಾಟಕದ ಇತಿಹಾಸದಲ್ಲಿಯೇ ಅತಿ ದೊಡ್ಡ ನಕ್ಸಲರ ಗುಂಪಿನ ಶರಣಾಗತಿಯಾದಂತಾಗಿದೆ. ಶಾಂತಿಗಾಗಿ ನಾಗರಿಕ ಸಮಿತಿಯ ಸದಸ್ಯರು ನಕ್ಸಲರ ಜೊತೆ ಸಂಧಾನ ನಡೆಸಿ ಶರಣಾಗತಿಗೆ ಮನವೊಲಿಸಿದ್ದರು. ರವಿ ಎಂಬ ನಕ್ಸಲ್ ಶರಣಾಗತಿ ಬಾಕಿ ಇದೆ. ಕರ್ನಾಟಕ ಮೂಲದವನಲ್ಲದ ರವಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ, ರವಿ ಸಂಪರ್ಕಿಸುವ ಯತ್ನ ಮುಂದುವರಿದಿದ್ದು, ಶೀಘ್ರವೇ ಶರಣಾಗುವ ಸಾಧ್ಯತೆ ಇದೆ.