ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ. 08 : ಮಾನಸಿಕ ಹಾಗೂ ದೈಹಿಕವಾಗಿ ಎಲ್ಲರೂ ಆರೋಗ್ಯವಾಗಿರಬೇಕೆಂದರೆ ಪ್ರತಿದಿನವೂ ಕನಿಷ್ಟ ಒಂದು ಗಂಟೆಯಾದರೂ ಯೋಗ, ಧ್ಯಾನ, ವ್ಯಾಯಾಮ ಮತ್ತು ವಾಯುವಿಹಾರ ಕಡ್ಡಾಯವಾಗಿರಬೇಕೆಂದು ರಾಘವೇಂದ್ರ ಫಾರ್ಮಸಿ ಕಾಲೇಜಿನ ಕಾರ್ಯದರ್ಶಿ ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಫಾರ್ಮಸಿ ಡೇ ಪ್ರಯುಕ್ತ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಜೀವನ ಶೈಲಿ ಹಾಗೂ ಒತ್ತಡದ ನಡುವೆ ಚಿಕ್ಕ ಚಿಕ್ಕ ಮಕ್ಕಳಿಗೂ ಹೃದಯಾಘಾತವಾಗುತ್ತಿರುವುದು ನೋವಿನ ಸಂಗತಿ. ನಿಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಪಠ್ಯಪುಸ್ತಕದ ಜೊತೆ ಪಠ್ಯೇತರ ಚಟುವಟಿಕೆ, ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಂದ ಮನಸ್ಸು ಉಲ್ಲಾಸವಾಗಿರುತ್ತದೆ. ಶಿಕ್ಷಣದ ಕಡೆ ಗಮನ ಕೊಡಿ. ಉತ್ತಮ ಅಂಕಗಳನ್ನು ಗಳಿಸಿ ಕಾಲೇಜು ಹಾಗೂ ಪೋಷಕರುಗಳಿಗೆ ಕೀರ್ತಿ ತನ್ನಿ ಎಂದು ಫಾರ್ಮಸಿ ವಿದ್ಯಾರ್ಥಿಗಳಿಗೆ ಶ್ರೀನಿವಾಸ್ ತಿಳಿಸಿದರು.
ಫಾಸ್ಟ್ ಫುಡ್‍ಗಳಿಂದ ಆದಷ್ಟು ದೂರವಿರುವುದು ಆರೋಗ್ಯಕ್ಕೆ ಒಳ್ಳೆಯದು. ಸಾಧ್ಯವಾದಷ್ಟು ಮನೆಯಲ್ಲಿ ಸಿದ್ದಪಡಿಸಿದ ಆಹಾರ ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ನೂರಾರು ಮಂದಿಯ ಪ್ರಾಣ ಉಳಿಸುವ ಹೊಣೆಗಾರಿಕೆ ಫಾರ್ಮಸಿಸ್ಟ್ ಗಳ ಮೇಲಿದೆ ಎಂದು ಹೇಳಿದರು.
ರಾಘವೇಂದ್ರ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಮಾತನಾಡಿ ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಲು ಸಹಾಯವಾಗಲಿದೆ. ಪೌಷ್ಠಿಕಾಂಶವುಳ್ಳ ಆಹಾರ ಸೇವನೆಯಿಂದ ದೇಹಕ್ಕೆ ಶಕ್ತಿ ಬರುತ್ತದೆ. ದಿನವಿಡಿ ಮಕ್ಕಳನ್ನು ಓದುವಂತೆ ಮನೆಯಲ್ಲಿ ಪೋಷಕರುಗಳು ಒತ್ತಡ ಹಾಕುವುದು ಸರಿಯಲ್ಲ. ಶಿಕ್ಷಣದ ನಡುವೆ ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಮನಸ್ಸು ಉಲ್ಲಾಸವಾಗಿರುತ್ತದೆ. ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಿದಂತೆ ಪರೀಕ್ಷೆ ಸಮಯದಲ್ಲಿ ಓದುವ ಬದಲು ಅಂದಿನ ಪಾಠವನ್ನು ಅಂದೇ ಓದಿಕೊಂಡರೆ ಪರೀಕ್ಷೆಯಲ್ಲಿ ಭಯವಿರುವುದಿಲ್ಲ. ಸ್ಪರ್ಧಾತ್ಮಕ ಯುಗವಾಗಿರುವುದರಿಂದ ಒಂದೊಂದು ಅಂಕಕ್ಕೂ ಪ್ರಾಮುಖ್ಯತೆಯಿದೆ. ಕಠಿಣ ಪರಿಶ್ರಮವಿದ್ದರೆ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದೆಂದರು.
ಇಮ್ರಾನ್, ಅಜೀರ, ಮಿಥುನ್, ಪ್ರವೀಣ್ ವೇದಿಕೆಯಲ್ಲಿದ್ದರು.
ಫೋಟೋ ವಿವರಣೆ : ಫಾರ್ಮಸಿ ಡೇ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕ್ರೀಡೆಯನ್ನು ರಾಘವೇಂದ್ರ ಫಾರ್ಮಸಿ ಕಾಲೇಜು ಕಾರ್ಯದರ್ಶಿ ಶ್ರೀನಿವಾಸ್ ಉದ್ಘಾಟಿಸಿದರು.