ನಿವೃತ್ತ ನೌಕರರ ದಿನಾಚರಣೆ : ಪ್ಯಾಕೆಟ್ ಕ್ಯಾಲೆಂಡರ್ ಬಿಡುಗಡೆ

suddionenews
2 Min Read

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ. 08 : ಹಿರಿಯ ನಾಗರೀಕರಿಗೆ ಸರ್ಕಾರದಿಂದ ಅನೇಕ ಯೋಜನೆಗಳಿವೆ. ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ನಿಮಗೆ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ನಿವೃತ್ತ ನೌಕರರಿಗೆ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯಿಂದ ತ.ರಾ.ಸು.ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ನಿವೃತ್ತ ನೌಕರರ ದಿನಾಚರಣೆ 2025 ನೇ ನೂತನ ವರ್ಷದ ಪ್ಯಾಕೆಟ್ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ನೌಕರರು ಕರ್ತವ್ಯದಲ್ಲಿದ್ದಾಗ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಾರೆ. ನಿವೃತ್ತಿಯಾದ ಮೇಲೆ ಅನೇಕ ಕುಂದು ಕೊರತೆ ಸಮಸ್ಯೆಗಳು ಎದುರಾಗುತ್ತವೆ. ನಿಮ್ಮ ತೊಂದರೆಗಳೇನಾದರೂ ಇದ್ದರೆ ಯಾವುದೇ ಸಂದರ್ಭದಲ್ಲಿ ನನ್ನ ಕಚೇರಿಗೆ ಬಂದು ಸಂಪರ್ಕಿಸಲು ಹಿಂಜರಿಕೆ ಬೇಡ. ಸದಾ ನಿಮ್ಮ ಜೊತೆಗಿರುತ್ತೇನೆ. ಮುಪ್ಪಿನ ಕಾಲದಲ್ಲಿ ನಿಮ್ಮ ಜೀವನಕ್ಕೆ ಯಾವುದೇ ಸಮಸ್ಯೆಯಾಗಬಾರದು. ಸರ್ಕಾರದಿಂದ ನಿಮಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ನೆಮ್ಮದಿಯ ಜೀವನ ಕಂಡುಕೊಳ್ಳಿ ಎಂದು ನಿವೃತ್ತ ನೌಕರರಿಗೆ ತಿಳಿಸಿದರು.

ಸರ್ಕಾರಿ ನೌಕರರು ಕಚೇರಿಗೆ ಕೆಲಸ ನಿಮಿತ್ತ ಬರುವ ಸಾರ್ವಜನಿಕರನ್ನು ವಿನಾ ಕಾರಣ ಅಲೆದಾಡಿಸಬಾರದು. ನಿಮ್ಮ ಹಂತದಲ್ಲಾಗುವ ಕೆಲಸವನ್ನು ಮಾಡಿಕೊಟ್ಟಾಗ ಸರ್ಕಾರಿ ನೌಕರರ ಬಗ್ಗೆ ಜನಸಾಮಾನ್ಯರಲ್ಲಿ ಗೌರವ ಮೂಡುತ್ತದೆ ಎಂದು ಹೇಳಿದರು.

ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಆರ್.ರಂಗಪ್ಪರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಪ್ರತಿ ವರ್ಷವು ನಿವೃತ್ತ ಸರ್ಕಾರಿ ನೌಕರರ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಚಂದ್ರಚೂಡ್‍ರವರು ನಿವೃತ್ತ ಸರ್ಕಾರಿ ನೌಕರರಿಗೆ ಸಿಗುವ ಸವಲತ್ತುಗಳನ್ನು ಆಳುವ ಸರ್ಕಾರಗಳು ಕೊಡಬೇಕು. ಅದು ಅವರ ಹಕ್ಕು. ಭಿಕ್ಷೆಯಲ್ಲ ಎಂದು ಪ್ರತಿಪಾದಿಸಿ ತೀರ್ಪು ನೀಡಿದ್ದರು ಎಂದು ಸ್ಮರಿಸಿಕೊಂಡರು.

2007 ರಿಂದಲೂ ಪ್ರತಿ ವರ್ಷವೂ ನಿವೃತ್ತ ನೌಕರರ ದಿನಾಚರಣೆಯಂದು ಪ್ಯಾಕೆಟ್ ಕ್ಯಾಲೆಂಡರ್ ಬಿಡುಗಡೆಗೊಳಿಸಿಕೊಂಡು ಬರಲಾಗುತ್ತಿದ್ದು, ಸಂಪೂರ್ಣ ಮಾಹಿತಿಯನ್ನೊಳಗೊಂಡಿರುತ್ತದೆ. ನಮ್ಮ ಸಂಘಕ್ಕೆ ಯಾವುದೇ ಹಣಕಾಸಿನ ಹೊರೆಯಾಗದಂತೆ ಜಾಹಿರಾತು ನೀಡುವ ಮೂಲಕ ಸಹಕರಿಸಿರುವ ಪ್ರಾಯೋಜಕರುಗಳ ಉದಾರತೆಯನ್ನು ಸ್ಮರಿಸಿದರು.

ಅಂಗವಿಕಲರ ಜಿಲ್ಲಾ ಕಲ್ಯಾಣಾಧಿಕಾರಿ ವೈಶಾಲಿ ಜೆ. ನಿವೃತ್ತ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ವೈ.ಚಂದ್ರಶೇಖರಯ್ಯ, ಸಾಂಸ್ಕøತಿಕ ಹಾಗೂ ಮನೋರಂಜನಾ ಕೇಂದ್ರದ ಅಧ್ಯಕ್ಷ ಕೆ.ವಾಸುದೇವರೆಡ್ಡಿ, ಎಂ.ಶಿವಾನಂದಪ್ಪ, ಬಿ.ಮಂಜುನಾಥ್, ಬಿ.ಪಿ.ಪ್ರೇಮನಾಥ್, ಎಫ್.ಆರ್.ಹಾಲಗೇರಿ, ಎನ್.ಆರ್.ಬೈಯಣ್ಣ, ನಾಗರಾಜ್ ಸೇರಿದಂತೆ ಕಾರ್ಯಕಾರಿ ಮಂಡಳಿ ಸದಸ್ಯರುಗಳು ಸಮಾರಂಭದಲ್ಲಿ ಹಾಜರಿದ್ದರು.

25 ಮಂದಿ ನಿವೃತ್ತರನ್ನು ಸನ್ಮಾನಿಸಲಾಯಿತು.
ತುಮಕೂರು ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ವೈ.ರಮಾಕುಮಾರ್, ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಇವರುಗಳಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *