ಬೆಂಗಳೂರು: ಕಾಂಗ್ರೆಸ್ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದಾಗಿನಿಂದ ಗೊಂದಲಗಳ ಸೃಷ್ಟಿ ಆಗ್ತಾನೆ ಇದೆ. ಅದರಲ್ಲೂ ವರ್ಷ ಕಳೆದಂತೆ ಸಿಎಂ ಸ್ಥಾನ ಬದಲಾಗುವ ಬಗ್ಗೆಯೂ ಚರ್ಚೆಗಳು, ಮಾತುಗಳು ಕೇಳಿಸುತ್ತಿವೆ. ಬಿಜೆಪಿ ನಾಯಕರು ಸಿಎಂ ಬದಲಾವಣೆಯ ವಿಚಾರದ ಬಗ್ಗೆ ಮಾತನಾಡಿದರೆ, ಕಾಂಗ್ರೆಸ್ ಒಳಗಿರುವವರು ಸಭೆ, ಮೀಟಿಂಗ್ ಗಳು ಚರ್ಚೆ ಹುಟ್ಟು ಹಾಕುತ್ತಿವೆ. ಅದರಲ್ಲೂ ಸತೀಶ್ ಜಾರಕಿಹೊಳಿ ಅವರು ನಡೆಸಿದ ಡಿನ್ನರ್ ಮೀಟಿಂಗ್ ಹಲವು ಆಯಾಮದಲ್ಲಿ ಚರ್ಚೆಯಾಗುತ್ತಿದೆ. ಸಿಎಂ ಬದಲಾವಣೆಗಾಗಿ ಈ ಮೀಟಿಂಗ್ ಅಂತೆಲ್ಲಾ ಚರ್ಚೆಗಳು ಶುರುವಾಗಿದೆ.
ಸತೀಶ್ ಜಾರಕಿಹೊಳಿ ಅವರು ಕರೆದಂತ ಡಿನ್ನರ್ ಮೀಟಿಂಗ್ ಇಷ್ಟೊಂದು ಚರ್ಚೆ ಹುಟ್ಟು ಹಾಕಿರುವ ಬೆನ್ನಲ್ಲೇ ಗೃಹ ಸಚಿವ ಜಿ.ಪರಮೇಶ್ವರ್ ಅವರು ಡಿನ್ನರ್ ಮೀಟಿಂಗ್ ಕರೆದಿದ್ದಾರೆ. ಈ ಮೀಟಿಂಗ್ ಬಗ್ಗೆ ಸಮಾಜ ಕಲ್ಯಾಣ ಖಾತೆ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿದ್ದು, ಮೀಟಿಂಗ್ ಗೆಲ್ಲಾ ಹೆಚ್ಚಿನ ಮಹತ್ವ ಸೃಷ್ಟಿಸುವ ಅಗತ್ಯವಿಲ್ಲ ಎಂದೇ ಹೇಳಿದ್ದಾರೆ.
ಇಂದು ಮಾಧ್ಯಮದವರ ಬಳಿ ಮಾತನಾಡಿದ ಸಚಿವ ಮಹದೇವಪ್ಪ ಅವರು, ಸತೀಶ್ ಜಾರಕಿಹೊಳಿ ಮನೆಯಲ್ಲಿ ನಡೆದ ಡಿನ್ನರ್ ಮೀಟಿಂಗ್ ಹಾಗೂ ನಾಳೆ ಪರಮೇಶ್ವರ್ ಮನೆಯಲ್ಲಿ ನಡೆಯುತ್ತಿರುವ ಡಿನ್ನರ್ ಮೀಟಿಂಗ್ ಬಗ್ಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. ಊಟಕ್ಕೆ ಎಂದು ಸೇರಿದರೆ ಸಿಎಂ ಸ್ಥಾನದ ಬಗ್ಗೆ ಚರ್ಚೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಚರ್ಚೆ ನಡೆಯುತ್ತದೆ ಎಂದು ಮಾಧ್ಯಮದವರೇ ಸೃಷ್ಟಿಸುತ್ತಾರೆ. ಸಿಎಂ ಸ್ಥಾನಕ್ಕೆ ಯಾವುದೇ ರೀತಿಯ ಸಂಚಕಾರವಿಲ್ಲ. ತಾನಾಗಲೀ, ಪರಮೇಶ್ವರ್ ಆಗಲಿ ಹೊಸಬರೇನು ಅಲ್ಲ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟು ಕೂತಿಲ್ಲ. ದಲಿತ ಸಮುದಾಯಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಇದಾವೆ. ಅವುಗಳನ್ನ ಚರ್ಚಿಸುವುದಕ್ಕಾಗಿ ಸಭೆ ಕರೆದಿದ್ದಾರೆ ಎಂದಿದ್ದಾರೆ.