ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದ ಜನರಲ್ಲಿ ಆತಂಕ ಮನೆ ಮಾಡಿದೆ. ಎಷ್ಟರಮಟ್ಟಿಗೆ ಅಂದ್ರೆ ಮತ್ತೆ ಲಾಕ್ಡೌನ್ ಆಗಬಹುದು. ಮತ್ತೆ ಜೀವನ ಅತಂತ್ರವಾಗಬಹುದು ಎಂಬ ಟೆನ್ಶನ್. ಯಾಕಂದ್ರೆ ಚೀನಾದಲ್ಲಿ ಹೊಸದೊಂದು ವೈರಸ್ ತಾಂಡವವಾಡ್ತಿದೆ ಎಂಬ ಮಾತು. HMPV ವೈರಸ್ ಈಗಾಗಲೇ ಬೆಂಗಳೂರಿನಲ್ಲೂ ಪತ್ತೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಇದರ ಬಗ್ಗೆ ಆತಂಕಗೊಳ್ಳಬೇಡಿ ಎಂದು ಸೂಚನೆ ನೀಡಿದೆ.
ಆದರೆ ಚೀನಾದಲ್ಲಿ ನಿಜಕ್ಕೂ ಆ ರೀತಿಯ ಪರಿಸ್ಥಿತಿ ಉಂಟಾಗಿದೆಯಾ..? ಆಸ್ಪತ್ರೆಗಳೆಲ್ಲಾ ತುಂಬಿ ತುಳುಕುತ್ತಿದೆಯಾ.? ಅಲ್ಲಿರುವ ಕನ್ನಡಿಗನೇ ಈ ಬಗ್ಗೆ ವಿಡಿಯೋ ಮಾಡಿ ಬಿಟ್ಟಿದ್ದಾರೆ. ಚೀನಾದಲ್ಲಿರುವ ಆಸ್ಪತ್ರೆಗಳೆಲ್ಲಾ ತುಂಬಿ ತುಳುಕುತ್ತಿಲ್ಲ, ಎಲ್ಲರಿಗೂ ಜ್ವರ ಬಂದು ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಕನ್ನಡಿಗನೇ ವಿಡಿಯೋ ಮಾಡಿ ತೋರಿಸಿದ್ದಾನೆ.
ಚೀನಾದಲ್ಲಿ ಜನ ಆರಾಮವಾಗಿ ಇದ್ದಾರೆ. ಭಾರತದ ಮಾಧ್ಯಮಗಳು ತೋರಿಸುತ್ತಿರುವಂತೆ ಇಲ್ಲಿ ಎಲ್ಲರು ಆಸ್ಪತ್ರೆಗೆ ಸೇರಿ ಏನೋ ದೊಡ್ಡ ದುರಂತ ಏನು ಆಗಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ ಅಲ್ಲಿನ ಆಸ್ಪತ್ರೆಗಳು, ರಸ್ತೆಗಳು, ಪಾರ್ಕ್ ಗಳಲ್ಲಿ ಜನ ಪ್ರತಿದಿನ ಇದ್ದಂತೆ ಸಾಮಾನ್ಯವಾಗಿಯೇ ಓಡಾಟ ನಡೆಸುತ್ತಿದ್ದು, ಅದೆಲ್ಲವನ್ನು ತಮ್ಮ ವಿಡಿಯೋದಲ್ಲಿ ತೋರಿಸಿದ್ದಾರೆ. ಈಗಾಗಲೇ ಚೀನಾದಲ್ಲಿರುವ ಹಲವು ಕನ್ನಡಿಗರು ಆ ಪರಿಸ್ಥಿತಿ ಬಗ್ಗೆ ವಿಡಿಯೋ ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚೀನಾದಲ್ಲಿ ಜನ ಸಹಜವಾಗಿಯೇ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಈ ವೈರಸ್ ಭೀತಿ ಹಬ್ಬಿದ್ದಾದರೂ ಹೇಗೆ ಎಂಬುದು ಅರ್ಥವಾಗುತ್ತಿಲ್ಲ. ಇನ್ನು ಮುಂಜಾಗ್ರತ ಕ್ರಮವಾಗಿ ಮಾಸ್ಕ್ ಧರಿಸುವುದು ಒಳ್ಳೆಯದೆ. ಹಾಗೇ ಚಳಿಗಾಲವಾಗಿರುವ ಕಾರಣ ಹಲವು ರೀತಿಯ ಕಾಯಿಲೆಗಳು ಕಾಣಿಸುತ್ತವೆ. ಆತಂಕ ಪಡುವ ಬದಲು ಆರೋಗ್ಯದ ಕಡೆಗೆ ಎಚ್ಚರಿಕೆ ಇರಲಿ.