ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ. 07 : ಅಕ್ಷರ ಕ್ರಾಂತಿಯುಂಟು ಮಾಡಿದ ಸಾವಿತ್ರಿಬಾಯಿಪುಲೆ ದೇಶ ಕಂಡಂತ ಅಪ್ರತಿಮ ದಿಟ್ಟ ಮಹಿಳೆ ಎಂದು ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗಾ ತಿಳಿಸಿದರು.
ಸಾವಿತ್ರಿಬಾಯಿಪುಲೆರವರ 194 ನೇ ಜಯಂತಿ ಅಂಗವಾಗಿ ಜಿಲ್ಲಾ ಮಾದಿಗ ಯುವ ಸೇನೆಯಿಂದ ಪತ್ರಕರ್ತರ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮನುವಾದಿಗಳು, ಬ್ರಾಹ್ಮಣರಿಗಷ್ಟೆ ಶಿಕ್ಷಣ ಮೀಸಲಾಗಿದ್ದ ಕಾಲದಲ್ಲಿ ಸಾವಿತ್ರಿಬಾಯಿಪುಲೆ ಮಹಿಳೆಯರಲ್ಲಿ ಅಕ್ಷರ ಜಾಗೃತಿಯನ್ನುಂಟು ಮಾಡಲು ಮುಂದಾದಾಗ ಅನೇಕ ಸಂಕಷ್ಟ
ಅವಮಾನಗಳನ್ನು ಅನುಭವಿಸಿದ್ದುಂಟು. ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಶಿಕ್ಷಣ ಕಲಿಸಲು ಹೋಗುತ್ತಿದ್ದಾಗ ಆಕೆಯ ಮೇಲೆ ಸಗಣಿ, ಕೆಸರು, ಕಲ್ಲುಗಳನ್ನು ಎಸೆಯುತ್ತಿದ್ದರು. ಇವೆಲ್ಲವನ್ನು ತಾಳ್ಮೆಯಿಂದ ಸಹಿಸಿಕೊಂಡು ಅಕ್ಷರ ಕಲಿಸಿದಂತ ಧೀರ ಮಹಿಳೆ ಎಂದು ಸ್ಮರಿಸಿದರು.
ಕೇಂದ್ರ ಗೃಹ ಸಚಿವ ಅಮಿತ್‍ಷಾ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಬಗ್ಗೆ ಸಂಸತ್‍ನಲ್ಲಿ ಕೇವಲವಾಗಿ ಮಾತನಾಡಿರುವುದನ್ನು ದಲಿತ ರಾಜಕಾರಣಿಗಳು ವಿರೋಧಿಸುತ್ತಿಲ್ಲ. ಕುರ್ಚಿಗೆ ಅಂಟಿಕೊಂಡಿದ್ದಾರೆ. ಇದರ ವಿರುದ್ದ ದಲಿತರು ಜಾಗೃತರಾಗಬೇಕೆಂದು ಎಚ್ಚರಿಸಿದರು.
ಉಪನ್ಯಾಸಕ ಡಾ.ಎಂ.ವೇದಾಂತ ಏಳಂಜಿ ಮಾತನಾಡಿ ಶೋಷಿತ ಜನಾಂಗಕ್ಕೆ ಅಕ್ಷರ ಕಲಿಸಬೇಕೆಂದು ಸಾವಿತ್ರಿಬಾಯಿಪುಲೆ, ಜ್ಯೋತಿಪುಲೆ ದಂಪತಿಗಳು 160 ವರ್ಷಗಳ ಹಿಂದೆ ಅಕ್ಷರ ಕ್ರಾಂತಿಯುಂಟು ಮಾಡಿದರು. ಜಾತಿ ಧರ್ಮಗಳ ಆಚೆ ಈ ದಂಪತಿಗಳು ಅಸ್ಪøಶ್ಯತಾ ನಿವಾರಣೆಗಾಗಿ ಶ್ರಮಿಸಿದವರು. ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆರವರನ್ನು ಸರ್ಕಾರ ಗೌರವಿಸಬೇಕಾಗಿದೆ ಎಂದು ಹೇಳಿದರು.
ಕೇಶಮುಂಡನ ವಿರುದ್ದ ಹೋರಾಡಿದ ಈ ದಂಪತಿಗಳು ಅಂರ್ತಜಾತಿ ವಿವಾಹವನ್ನು ಪ್ರೋತ್ಸಾಹಿಸುತ್ತಿದ್ದರು. ಮಹಿಳಾ ಸೇವಾ ಮಂಡಳಿ, ಹಾಸ್ಟೆಲ್‍ಗಳಿಗೆ ಒತ್ತು ವಿಧವೆಯವರಿಗೆ ಆಶ್ರಯ ನೀಡುತ್ತಿದ್ದರು. ಸಾವಿತ್ರಿಬಾಯಿಪುಲೆರವರ ಲೇಖನಗಳನ್ನು ಓದಿಕೊಂಡು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರೇರೇಪಿತರಾಗಿದ್ದರು ಎಂದು ಸ್ಮರಿಸಿದರು.
ದಲಿತ ಮುಖಂಡ ಬಿ.ರಾಜಪ್ಪ ಮಾತನಾಡಿ ದೇಶದ ಪ್ರಥಮ ಮಹಿಳಾ ಶಿಕ್ಷಕಿಯಾಗಿದ್ದ ಸಾವಿತ್ರಿಬಾಯಿಪುಲೆ ಶಾಲೆ ತೆರೆದು ಎಲ್ಲಾ ಜಾತಿಯವರಿಗೆ ಅಕ್ಷರ ಕಲಿಸಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದ ಸಾವಿತ್ರಿಬಾಯಿ ಪುಲೆ ಅನೇಕ ನೋವು ಅವಮಾನಗಳನ್ನು ಅನುಭವಿಸಿದರು. ಅಕ್ಷರ ಕಲಿಸುವುದರಿಂದ ಹಿಂದೆ ಸರಿಯಲಿಲ್ಲ. ಅಂಬೇಡ್ಕರ್‍ರವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟ ಎಲ್ಲರ ಧ್ಯೇಯವಾಗಬೇಕೆಂದರು.
ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡುತ್ತ ಹೆಣ್ಣು ಮಕ್ಕಳು ಶಿಕ್ಷಣವಂತರಾಗಬೇಕೆಂಬುದು ಜ್ಯೋತಿಬಾಯಿ ಪುಲೆರವರ ಕನಸಾಗಿತ್ತು. ಇದಕ್ಕೆ ಅವರ ಪತಿ ಜ್ಯೋತಿಬಾಪುಲೆರವರ ಪ್ರೋತ್ಸಾಹವಿತ್ತು. ಜ್ಯೋತಿಬಾಯಿಪುಲೆ ಶಿಕ್ಷಣ ಕಲಿಸಲು ಹೋಗುತ್ತಿದ್ದಾಗ ಬ್ರಾಹ್ಮಣ್ಯರು ಕಲ್ಲು, ಸಗಣಿ, ಕೆಸರಿನಿಂದ ಹೊಡೆಯುತ್ತಿದ್ದರು. ಇದ್ಯಾವುದಕ್ಕೂ ಎದೆಗುಂದುತ್ತಿರಲಿಲ್ಲ. ದಲಿತ ನಾಯಕರುಗಳಾದ ಪ್ರೊ.ಬಿ.ಕೃಷ್ಣಪ್ಪ, ಎಂ.ಜಯಣ್ಣನವರು ದಿಟ್ಟ ಹೋರಾಟಗಾರರಾಗಿದ್ದರು. ಅಂತಹ ಹೋರಾಟಗಾರರು ಈಗಿನ ಸಮಾಜಕ್ಕೆ ಬೇಕಿದೆ. ಜ್ಯೋತಿಬಾಯಿಪುಲೆರವರ ಆಸೆಯಂತೆ ಹೆಣ್ಣು ಮಕ್ಕಳು ಶಿಕ್ಷಣವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.
ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲಾ ಜಾತಿ ಧರ್ಮದವರಿಗೂ ಸಮಾನವಾದ ಹಕ್ಕು ನೀಡಿದ್ದಾರೆ. ಹೋರಾಟದಿಂದ ಮಾತ್ರ ದಲಿತರು ನ್ಯಾಯ ಪಡೆಯಲು ಸಾಧ್ಯ. ಮನುವಾದಿಗಳು ದಲಿತರ ವಿರುದ್ದ ಪಿತೂರಿ ನಡೆಸುತ್ತಿದ್ದಾರೆ. ಬುದ್ದ, ಬಸವ, ಅಂಬೇಡ್ಕರ್ ಇವರುಗಳು ಈ ನಾಡಿನಲ್ಲಿ ಹುಟ್ಟದೆ ಇರದಿದ್ದರೆ ದಲಿತರ ಸ್ಥಿತಿ ಶೋಚನೀಯವಾಗಿರುತ್ತಿತ್ತು ಎಂದು ವಿಷಾಧಿಸಿದರು.
ಸತ್ಯಪ್ಪ ಮಲ್ಲಾಪುರ, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಬೆಳಗಟ್ಟ, ಹನುಮಂತಪ್ಪ ಗೋನೂರು, ತಿಪ್ಪೇಸ್ವಾಮಿ ಇವರುಗಳು ವೇದಿಕೆಯಲ್ಲಿದ್ದರು.