ಬೆಂಗಳೂರು: ಕೊರೊನಾ ವೈರಸ್ ರೂಪಾಂತರಿಯಾಗಿ ಜನರ ನಿದ್ದೆ ಕೆಡಿಸುತ್ತಿದೆ. ಬೇರೆ ಬೇರೆ ದೇಶದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದ್ದ ಒಮಿಕ್ರಾನ್ ವೈರಸ್ ಭಾರಯಕ್ಕೆ ಬಂದಿರಲಿಲ್ಲ. ಹೀಗಾಗಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು. ಆದ್ರೀಗ ಭಾರತದಲ್ಲಿ ವೈರಸ್ ಕಾಣಿಸಿಕೊಂಡು ಆತಂಕಕ್ಕೀಡು ಮಾಡಿದೆ.
ಅದರಲ್ಲೂ ಕರ್ನಾಟಕದಲ್ಲೇ ವೈರಸ್ ಪತ್ತೆಯಾಗಿರುವುದು ಮತ್ತಷ್ಟು ಆತಂಕ ಮನೆ ಮಾಡಿದೆ. ಕೇಂದ್ರ ಆರೋಗ್ಯ ಇಲಾಖೆ ಈ ಘೋಷಣೆ ಮಾಡಿದ್ದು, ಎರಡು ದಿನಗಳ ಹಿಂದೆ ಬೆಂಗಳೂರಿಗೆ ಬಂದವರಲ್ಲಿ ಈ ಒಮಿಕ್ರಾನ್ ವೈರಸ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವಾ ಅಗರವಾಲ್ ಎಂಬುವವರು ಮಾಹಿತಿ ನೀಡಿದ್ದಾರೆ.
ಈ ಇಬ್ಬರು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದಾರೆ. ಪರೀಕ್ಷೆ ನಡೆಸಿದಾಗ ಈ ಇಬ್ಬರಲ್ಲೂ ಹೊಸ ತಳಿ ಒಮಿಕ್ರಾನ್ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿತರಿಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.