ಹೈದ್ರಾಬಾದ್: ಪುಷ್ಪ-2 ಸಿನಿಮಾ ರಿಲೀಸ್ ಆಗಿ ದೊಡ್ಡಮಟ್ಟದ ಯಶಸ್ಸನ್ನು ಗಳಿಸಿದೆ. ಸಾವಿರಾರು ಕೋಟಿ ಕಲೆಕ್ಷನ್ ಕೂಡ ಮಾಡಿದೆ. ಆದರೆ ಅಲ್ಲು ಅರ್ಜುನ್ ಫ್ಯಾನ್ಸ್ ಖುಷಿ ಪಡಿಸಲೆಂದು ಥಿಯೇಟರ್ ಗೆ ಹೋಗಿದ್ದಾಗ ದೊಡ್ಡ ಪ್ರಮಾಣದ ಅವಘಡ ನಡೆದಿತ್ತು. ಮಹಿಳಾ ಅಭಿಮಾನಿ ಕಾಲ್ತುಳಿತಕ್ಜೆ ಸಿಲುಕಿ ಸಾವನ್ನಪ್ಪಿದ್ದರು. ಆ ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಸ್ಟೇಷನ್ ಮೆಟ್ಟಿಲು ಹತ್ತಿ ಬಂದರು. ಮೃತ ಮಹಿಳೆಯ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಆದರೆ ಇದೀಗ 2 ಕೋಟಿ ಘೋಷಣೆ ಮಾಡಲಾಗಿದೆ.
ಮೊನ್ನೆಯಷ್ಟೇ ಕೆಲ ಯುವಕರು ಅಲ್ಲು ಅರ್ಜುನ್ ಮನೆ ಬಳಿಯಲ್ಲಿ ದಾಂಧಲೆ ನಡೆಸಿದ್ದರು. ಪಾಟ್ ಗಳನ್ನೆಲ್ಲ ಒಡೆದು ಹಾಕಿ, ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿದ್ದರು. ಜನ ಒತ್ತಡಕ್ಕೆ ಮಣಿದ ಚಿತ್ರತಂಡ ಇದೀಗ ಮಹತ್ವದ ನಿರ್ಧಾರಕ್ಕೆ ಬಂದಿದೆ. ಅಲ್ಲು ಅರ್ಜುನ್ ಕಡೆಯಿಂದ ಒಂದು ಕೋಟಿ, ನಿರ್ದೇಶಕ ಸುಕುಮಾರ್ ಕಡೆಯಿಂದ ಐವತ್ತು ಲಕ್ಷ, ನಿರ್ಮಾಪಕರಿಂದ ಐವತ್ತು ಲಕ್ಷ ಎಲ್ಲಾ ಸೇರಿ ಎರಡು ಕೋಟಿ ನೀಡುತ್ತಿದೆ.
ಅಲ್ಲು ಅರ್ಜುನ್ ಸಿನಿಮಾದಿಂದ ಆದಂತ ಬೆಳವಣಿಗೆ ರಾಜಕೀಯ ರೂಪ ಪಡೆದುಕೊಂಡಿದೆ. ಅಲ್ಲು ಅರ್ಜುನ್ ಹಾಗೂ ಸಿಎಂ ರೇವಂತ್ ರೆಡ್ಡಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎನ್ನಲಾಗಿದೆ. ಈ ಕಹಿ ಘಟನೆಯ ನಡುವೆ ಮೃತ ಮಹಿಳೆಯ ಮಗ ಶ್ರೀತೇಜಾ ಕೋಮಾದಿಂದ ಹೊರಗೆ ಬಂದಿದ್ದಾನೆ. ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ಇಷ್ಟು ದಿನ ವೆಂಟಿಲೇಟರ್ ನಲ್ಲಿ ಆಕ್ಸಿಜನ್ ನೀಡಲಾಗುತ್ತಿತ್ತು. ಆದರೆ ಇಂದು ವೆಂಟಿಲೇಟರ್ ತೆಗೆದು ಚಿಕಿತ್ಸೆಯನ್ನು ನೀಡಲಾಗುತ್ತಿದೆ.