ಸುದ್ದಿಒನ್ ವಿಶೇಷ ವರದಿ
ಚಿತ್ರದುರ್ಗ, ಡಿಸೆಂಬರ್. 25 : ದುರ್ಗದಿಂದ ಕೂಗಳತೆಯ ದೂರದಲ್ಲಿರುವ ಮದಕರಿಪುರ ಗ್ರಾಮ ಮಂಗಳವಾರ ಭಣಗುಡುತ್ತಿತ್ತು. ಎಲ್ಲಾ ಮನೆಗಳಿಗೂ ಬೀಗ ಹಾಕಲಾಗಿತ್ತು. ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳು ಕೂಡಾ ಇರಲಿಲ್ಲ. ಊರಿನ ಯಾವುದೇ ಮೂಲೆಗೆ ಹೋದರೂ ನರಪಿಳ್ಳೆಯೂ ಕಂಡುಬರಲಿಲ್ಲ. ಇದು ಮದಕರಿಪುರ ಗ್ರಾಮದಲ್ಲಿ ಮಂಗಳವಾರ ಕಂಡುಬಂದ ದೃಶ್ಯ. ಆಕಸ್ಮಿಕವಾಗಿ ಯಾರಾದರೂ ಹೊರಗಡೆಯಿಂದ ಊರಿಗೆ ಕಾಲಿಟ್ಟವರು ಅಚ್ಚರಿ ಪಡುವ ರೀತಿ ಬೀಕೋ ಎನ್ನುತ್ತಿತ್ತು ಗ್ರಾಮ.
ಈ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಹೊರಬೀಡು ಪದ್ಧತಿ ಈಗಲೂ ಇಲ್ಲಿ ಆಚರಣೆಯಲ್ಲಿದೆ. ಮೂರು ವರ್ಷಕ್ಕೊಮ್ಮೆ ಇಡೀ ಊರಿನ ಜನರು ಮನೆಗೆ ಬೀಗ ಹಾಕಿಕೊಂಡು ಜಮೀನು, ತೋಟದಮನೆ, ಗುಡ್ಡಗಾಡು ಪ್ರದೇಶದಲ್ಲಿ ಒಂದು ದಿನ ಕಳೆದರು.
ದಾವಣಗೆರೆ,ಬಳ್ಳಾರಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಈಗಲೂ ಈ ಆಚರಣೆ ರೂಢಿಯಲ್ಲಿದೆ. ಅನೇಕ ಊರುಗಳಲ್ಲಿರುವಂತೆ ಇಲ್ಲಿಯೂ ಹೊರಬೀಡು ಮಂಗಳವಾರ ಆಚರಿಸಲಾಯಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಗ್ರಾಮದೇವತೆ ಕೊಲ್ಲಪುರದಮ್ಮ, ಆಂಜನೇಯ ಸ್ವಾಮಿ ಸೇರಿ ಅನೇಕ ದೇವರುಗಳಿಗೆ ಪಲ್ಲಕ್ಕಿಯಲ್ಲಿ ಮೆರವಣಿಗೆಯೊಂದಿಗೆ ಪೂಜೆ ಸಲ್ಲಿಸಿ ಊರಿನ ಹೊರಗಡೆ ಕರೆದೊಯ್ದು ಅಲ್ಲಿ ಪೂಜೆ ಸಲ್ಲಿಸಿ, ದೇವರಿಗೆ ನೈವೇದ್ಯ ಸಲ್ಲಿಸಲಾಗುತ್ತದೆ. ಜಾನುವಾರು ಸಹಿತ ಕುರಿ, ಕೋಳಿ, ಬೆಕ್ಕು, ವೃದ್ಧರು, ಗರ್ಭಿಣಿ, ಬಾಣಂತಿಯರು, ಹಸುಗೂಸು ಸಹಿತ ಇಡೀ ಗ್ರಾಮದ ಜನರೇ ಊರು ತೊರೆಯುತ್ತಾರೆ. ಮಧ್ಯಾಹ್ನ ಹೋಳಿಗೆ, ಪಾಯಸ ವಿವಿಧ ಖಾದ್ಯಗಳನ್ನು ತಯಾರಿಸಿ ಸಂಬಂಧಿಕರ ಜತೆ ಊಟ ಸವಿಯುತ್ತಾರೆ.
ಹೊತ್ತು ಮುಳುಗಿ ಕತ್ತಲು ಆವರಿಸಿಕೊಳ್ಳುತ್ತಿದ್ದಂತೆ ಹೊರಬೀಡು ಹೋದವರೆಲ್ಲಾ ಒಬ್ಬೊಬ್ಬರಾಗಿ ಊರಿನತ್ತ ಆಗಮಿಸಲು ಆರಂಭಿಸುತ್ತಾರೆ. ಗ್ರಾಮವನ್ನು ಮರು ಪ್ರವೇಶಿಸಿದ ನಂತರ ಮನೆಯ ಅಂಗಳವನ್ನು ನೀರಿನಿಂದ ಸಾರಿಸಿ ನಂತರ ಹೊಸ್ತಿಲಿಗೆ ಅರಿಶಿಣ ಮತ್ತು ಕುಂಕುಮ ಹಾಕಿದ ನಂತರ ಬೀಗ ತೆರೆದು ಮೊದಲಿಗೆ ಗೋವನ್ನು ಬಿಡುವರು, ನಂತರ ಮನೆಯವರು ಮನೆ ಸೇರಿಕೊಳ್ಳುವರು.
ಸಂಜೆ 7ಕ್ಕೆ ಕೊಲ್ಲಪುರದಮ್ಮ ದೇವಸ್ಥಾನದ ಅಂಗಳಕ್ಕೆ ಆಗಮಿಸಿ ದೀಪ ಹಚ್ಚುವ ಮೂಲಕ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ತಮ್ಮ ಮನೆಯ ಬೀಗ ತೆರೆದು ಹಸು ಪ್ರವೇಶದ ಮೂಲಕ ಮನೆ ಪ್ರವೇಶಿಸಿದ ಜನರು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ದೇವಸ್ಥಾನದ ಬಳಿ ಬಂದು ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಈ ಮೂಲಕ ಹೊರಬೀಡು ಪದ್ಧತಿಗೆ ತೆರೆ ಎಳೆಯಲಾಯಿತು. ಈ ಆಚರಣೆ ಹೇಗೆ ನಡೆದುಕೊಂಡು ಬಂದಿದೆ ಎಂಬ ಮಾಹಿತಿ ಗ್ರಾಮಸ್ಥರಿಗೆ ನಿಖರವಾಗಿ ಇಲ್ಲವಾದರೂ ಪೂರ್ವಿಕರು ನಡೆಸಿಕೊಂಡು ಬಂದ ಪದ್ಧತಿ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂಬುದು ಹಳ್ಳಿಗರ ಅಭಿಪ್ರಾಯ.
ಬಹುತೇಕ ಊರಿಗೆ ಒಳ್ಳೆಯದು ಆಗಲಿ, ಮಳೆ-ಬೆಳೆ ಚೆನ್ನಾಗಿ ಆಗಿ ಗ್ರಾಮ ಸಮೃದ್ಧವಾಗಿರಲಿ. ರೋಗ-ರುಜೀನ ಸಮೀಪ ಬಾರದಿರಲಿ ಎಂಬ ಕಾರಣಕ್ಕೆ ಮೂರು ವರ್ಷಕ್ಕೊಮ್ಮೆ ಊರು ತೊರೆಯುವ ಪದ್ಧತಿ ಆಚರಣೆಗೆ ಬಂದಿರಬಹುದು. ಜತೆಗೆ ಹಳ್ಳಿಗಳಲ್ಲಿ ವಿವಿಧ ಕಾರಣಕ್ಕೆ ಮಾತು ಬಿಟ್ಟವರು, ಮುನಿಸಿಕೊಂಡ ಸಂಬಂಧಿಕರು ತಮ್ಮ ತಮ್ಮ ಜಮೀನುಗಳಲ್ಲಿ ಒಟ್ಟಾಗಿ ಸೇರಿ ಅಡುಗೆ ತಯಾರಿಸಿ ಊಟ ಮಾಡುವ ಮೂಲಕ ದ್ವೇಷದ ನಡೆಗೆ ತೆರೆ ಬೀಳುತ್ತದೆ. ಹೀಗೆ ವಿವಿಧ ರೀತಿ ಗ್ರಾಮ ಹಾಗೂ ಗ್ರಾಮಸ್ಥರ ಹಿತಕ್ಕೆ ಪೂರಕವಾಗಿ ಪೂರ್ವಿಕರು ಈ ಆಚರಣೆಗೆ ಮುನ್ನುಡಿ ಬರೆದಿರಬಹುದು ಎಂಬುದು ಕೊಲ್ಲಾಪುರದಮ್ಮ ದೇಗುಲದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಭೈರಪ್ಪ, ಕಾರ್ಯದರ್ಶಿ ಮೂರ್ತಣ್ಣ, ನಿರ್ದೇಶಕರಾದ ಲಕ್ಷ್ಮಣ್, ಶ್ರೀನಿವಾಸ್ ಇತರರ ಅಭಿಪ್ರಾಯ ಆಗಿದೆ.