ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 21 : ಕಿಡ್ನಿ ವೈಫಲ್ಯದಿಂದ ಡಯಾಲಿಸಿಸ್‍ಗೆ ಒಳಗಾಗುವ ರೋಗಿಗಳಿಗೆ ಪರಿಶುದ್ದವಾದ ನೀರಿನ ಅವಶ್ಯಕತೆಯಿದೆ ಎನ್ನುವುದನ್ನು ಮನಗಂಡು ಮಳೆ ನೀರು ಕೊಯ್ಲು
ತಜ್ಞ ಎನ್.ಜೆ.ದೇವರಾಜರೆಡ್ಡಿರವರು ಯಾವುದೆ ಫಲಾಪೇಕ್ಷೆಯಿಲ್ಲದೆ ರೋಟರಿ ಸೇವಾ ಭವನದಲ್ಲಿ 45 ಸಾವಿರ ಲೀಟರ್ ಸಾಮಾರ್ಥ್ಯದ ಮಳೆ ನೀರು ಕೊಯ್ಲು ಹಾಗೂ ಕೊಳವೆಬಾವಿ ಜಲ ಮರುಪೂರಣ ಘಟಕ ತೊಟ್ಟಿಯನ್ನು ನಿರ್ಮಿಸಿ ಮಾನವೀಯತೆ ಮೆರೆದಿದ್ದಾರೆ.
ಚಿತ್ರದುರ್ಗ ರೋಟರಿ ಕ್ಲಬ್ ಆರಂಭಗೊಂಡ 60 ವರ್ಷದ ಇತಿಹಾಸದಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯುವ ಕನಸಿನ ಯೋಜನೆ ಇದಾಗಿದ್ದು, ಡಯಾಲಿಸಿಸ್ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಶಾಂತಿಸಾಗರದಿಂದ ಪೂರೈಕೆಯಾಗುವ ನೀರಿನಲ್ಲಿ ಹದಿನೈದು ಸಾವಿರ ಲೀಟರ್ ಸಂಗ್ರಹಿಸಿಕೊಳ್ಳುವಷ್ಟು ವಿಶಾಲವಾದ ತೊಟ್ಟಿಯನ್ನು ಶ್ರಮದಾನದ ಮೂಲಕ ಎನ್.ಜೆ.ದೇವರಾಜರಡ್ಡಿ ನಿರ್ಮಿಸಿದ್ದಾರೆ.
ಡಯಾಲಿಸಿಸ್ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಸಿಗಲಿ ಎನ್ನುವ ಸದುದ್ದೇಶದಿಂದ ಚಿತ್ರದುರ್ಗ ರೋಟರಿ ಕ್ಲಬ್‍ನವರು ನಾಲ್ಕು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಟ್ಟಡಕ್ಕೆ ಸಾರ್ವಜನಿಕರ ದೇಣಿಗೆಯೂ ಸಿಕ್ಕಿದೆ. ಇಲ್ಲಿ ಮಳೆ ನೀರು ಕೊಯ್ಲಿಗೆ ಒತ್ತು ಕೊಟ್ಟಿರುವ ಎನ್.ಜೆ.ದೇವರಾಜರೆಡ್ಡಿರವರು ನಿಸ್ವಾರ್ಥವಾಗಿ ನೀರಿನ ತೊಟ್ಟಿಯನ್ನು ನಿರ್ಮಿಸಿ ಚಿತ್ರದುರ್ಗ ರೋಟರಿ ಕ್ಲಬ್‍ನ ಉಚಿತ ಸೇವಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ಡಯಾಲಿಸಿಸ್, ಫಿಜಿಯೋಥೆರಪಿ, ಬ್ಲಡ್ ಮತ್ತು ಐ ಬ್ಯಾಂಕ್ ಓ.ಪಿ.ಡಿ. ವೈದ್ಯರು, ಹಾಗೂ ಸಿಬ್ಬಂದಿ ಡಯಾಲಿಸಿಸ್ ರೋಗಿಗಳ ಚಿಕಿತ್ಸೆಗೆ ಸದಾ ಸಿದ್ದರಿರುತ್ತಾರೆ. ಸಿ.ಎ.ಸೈಟ್ ಖರೀದಿಸಿ 42 ಚದರ ಅಡಿಯಲ್ಲಿ ಎರಡುವರೆ ವರ್ಷದ ಹಿಂದೆ ಆರಂಭಗೊಂಡ ಕಟ್ಟಡ ಕಾಮಗಾರಿ ಫೆ.15 ರೊಳಗೆ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ. ರಾಜಧಾನಿ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ದೊರಕುವಂತ ಸುಸಜ್ಜಿತ ಯಂತ್ರಗಳ ಸಹಾಯದಿಂದ ಡಯಾಲಿಸಿಸ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದಕ್ಕಾಗಿ ಸಿದ್ದಗೊಳ್ಳುತ್ತಿರುವ ಡಯಾಲಿಸಿಸ್ ಕೇಂದ್ರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ ಎಂದು ರೋಟರಿ ಕ್ಲಬ್ ಚಿತ್ರದುರ್ಗದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ರೋಟರಿ ಕ್ಲಬ್ ಚಿತ್ರದುರ್ಗ ಅಧ್ಯಕ್ಷ ವೀರಣ್ಣ, ಕಾರ್ಯದರ್ಶಿ ಶಿವಣ್ಣ, ಪಿ.ಡಿ.ಜಿ.ಮಧುಪ್ರಸಾದ್, ರೋಟರಿ ಕ್ಲಬ್ ಫೋರ್ಟ್ ಅಧ್ಯಕ್ಷ ಮಂಜುನಾಥ್ ಭಾಗವತ್, ಇನ್ನರ್‍ವೀಲ್ ಕ್ಲಬ್ ಸದಸ್ಯೆ ಗಾಯತ್ರಿ ಶಿವರಾಂ, ರೋಟರಿ ಕ್ಲಬ್ ಫೋರ್ಟ್ ಕಾರ್ಯದರ್ಶಿ ಶಿವರಾಂ, ರೋಟರಿ ಕ್ಲಬ್ ಸದಸ್ಯರು ಹಾಗೂ ಮಳೆನೀರು ಕೊಯ್ಲು ತಜ್ಞ
ಎನ್.ಜೆ.ದೇವರಾಜರೆಡ್ಡಿರವರು ಎಸ್.ಆರ್.ಬಿ.ಎಂ.ಎಸ್. ರೋಟರಿ ಸೇವಾ ಭವನದಲ್ಲಿ ನಿರ್ಮಾಣವಾಗಿರುವ ಡಯಾಲಿಸಿಸ್ ಕೇಂದ್ರದ ಮಳೆನೀರು ಕೊಯ್ಲು ಹಾಗೂ ಕೊಳವೆಬಾವಿ ಜಲ ಮರುಪೂರಣ ಘಟಕ ವೀಕ್ಷಿಸಿದರು.