ಒಮಿಕ್ರಾನ್ ಆತಂಕ : ಯಾವುದೇ ದೇಶದಿಂದ ಬಂದರೂ ಕಡ್ಡಾಯ ಕೋವಿಡ್ ಪರೀಕ್ಷೆ ಎಂದ ಸಚಿವ ಡಾ.ಕೆ.ಸುಧಾಕರ್

1 Min Read

 

ಬೆಂಗಳೂರು : ವಿದೇಶಗಳಿಂದ ರಾಜ್ಯಕ್ಕೆ ಪ್ರತಿ ದಿನ ಸುಮಾರು 2,500 ಪ್ರಯಾಣಿಕರು ಬಂದಿಳಿಯುತ್ತಿದ್ದು, ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

 

ವಿಧಾನಸೌಧದಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವೈರಾಣು ಕಂಡುಬಂದಿರುವ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ. ಯಾವುದೇ ದೇಶಗಳಿಂದ ಬಂದ ಪ್ರಯಾಣಿಕರಿಗೂ ಪರೀಕ್ಷೆ ನಡೆಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಪ್ರತಿ ದಿನ ಸುಮಾರು 2,500 ಪ್ರಯಾಣಿಕರು ವಿದೇಶಗಳಿಂದ ರಾಜ್ಯಕ್ಕೆ ಬರುತ್ತಿದ್ದಾರೆ. ನೆಗೆಟಿವ್ ಇದ್ದವರಿಗೆ ಏಳು ದಿನಗಳ ಕಾಲ ಮನೆ ಕ್ವಾರಂಟೈನ್ ಮಾಡಲಾಗುತ್ತದೆ. ರೋಗ ಲಕ್ಷಣವಿದ್ದರೂ, ನೆಗೆಟಿವ್ ಆದವರಿಗೆ 5ನೇ ದಿನ ಮತ್ತೆ ಮನೆಯಲ್ಲೇ ಪರೀಕ್ಷೆ ಮಾಡಲಾಗುತ್ತದೆ. ಎ ಸಿಂಪ್ಟಮ್ಯಾಟಿಕ್ ಆದವರಿಗೆ 7 ನೇ ದಿನ ಪರೀಕ್ಷೆ ಮಾಡಲಾಗುತ್ತದೆ. ಪಾಸಿಟಿವ್ ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಆದರೆ ಇಂಥವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುವುದು ಎಂದು ವಿವರಿಸಿದರು.

ಜಗತ್ತಿನ 12 ದೇಶಗಳಲ್ಲಿ ಕೋವಿಡ್ ನ ಹೊಸ ಓಮಿಕ್ರಾನ್ ವೈರಾಣು ಪತ್ತೆಯಾಗಿದೆ. ರಾಜ್ಯದಲ್ಲೂ ಇದು ಬರಬಹುದು ಎಂಬ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ. ಜನಸಂಖ್ಯೆ, ಆರೋಗ್ಯ ಮೂಲಸೌಕರ್ಯಗಳನ್ನು ಪರಿಗಣಿಸಿದರೆ ಬೇರೆ ದೇಶಗಳಿಗಿಂತ ನಾವು ಹೆಚ್ಚು ಎಚ್ಚರ ವಹಿಸಬೇಕಾಗುತ್ತದೆ. ಇದಕ್ಕಾಗಿ ಆರೋಗ್ಯ ವ್ಯವಸ್ಥೆಯಲ್ಲಿ ಮಾಡಬೇಕಿರುವ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಹಾಸಿಗೆ, ಆಕ್ಸಿಜನ್ ಹಾಸಿಗೆ, ವೈದ್ಯರು ಹಾಗೂ ಅಧಿಕಾರಿಗಳ ನಿಯೋಜನೆ, ಔಷಧಿ ಪೂರೈಕೆ ಮೊದಲಾದವುಗಳ ಬಗ್ಗೆ ಚರ್ಚೆಯಾಗಿದೆ. ಜನರು ಸುರಕ್ಷಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಬೇಕಿದೆ. ಇದಕ್ಕಾಗಿ ಕೆಲ ಕ್ರಮಗಳನ್ನು ವಹಿಸಬೇಕೆಂದು ಸಲಹೆ ನೀಡಲಾಗಿದೆ. ಕೋವಿಡ್ ಲಸಿಕೆಯ ಎರಡನೇ ಡೋಸ್ ಅನ್ನು 41 ಲಕ್ಷ ಜನರು ಪಡೆಯಬೇಕಿದೆ. ಇದಕ್ಕಾಗಿ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುವುದು ಎಂದರು.

ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಂದಲೂ ಮಾದರಿಗಳನ್ನು ಪಡೆಯುತ್ತಿದೆ. ಪ್ರತಿ ಪ್ರಯಾಣಿಕರ ಸಂಪರ್ಕಿತರನ್ನು ಪತ್ತೆ ಮಾಡಿ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *