ಚಾಮರಾಜನಗರ: ಒಂದು ಕಡೆ ಓಮಿಕ್ರಾನ್ ಭೀತಿ ಮತ್ತೊಂದು ಕಡೆ ಕೊರೊನಾ ಹೆಚ್ಚಳವಾಗ್ತಾನೆ ಇದೆ. ಅದ್ರಲ್ಲೂ ವಿದ್ಯಾರ್ಥಿಗಳಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಧಾರವಾಡದಲ್ಲಿ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಕೊರೊನಾ ಇದೀಗ ಚಾಮರಾಜನಗರಕ್ಕೂ ವಕ್ಕರಿಸಿ ಕೊಂಡಿದೆ.
ಇಬ್ಬರು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೊಡಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಶಾಲೆಯ ಶಿಕ್ಷಕರೊಬ್ಬರಿಗೆ ನಿನ್ನೆ ಕೊರೋನಾ ಪಾಸಿಟಿವ್ ಆಗಿತ್ತು. ಅದೇ ಶಾಲೆಯಲ್ಲಿ ಆ ಶಿಕ್ಷಕರ ಜೊತೆ ಸಂಪರ್ಕದಲ್ಲಿದ್ದ ಇಬ್ಬರು ಮಕ್ಕಳಿಗೆ ಸೋಂಕು ದೃಢಪಟ್ಟಿದೆ.
ಶಾಲೆಯ ಇನ್ನುಳಿದ 73 ವಿದ್ಯಾರ್ಥಿಗಳಿಗೆ ಆರ್. ಟಿ.ಪಿ.ಸಿ.ಆರ್ ಟೆಸ್ಟ್ ಮಾಡಿಸಲಾಗಿದೆ. ಸದ್ಯಕ್ಕೆ ಎಲ್ಲಾ ಶಾಲಾ ಕೊಠಡಿ ಗಳಿಗೆ ಸ್ಯಾನಿಟೈಸ್ ಮಾಡಿಸಲಾಗಿದ್ದು, ಮುಂಜಾಗ್ರತ ಕ್ರಮವಾಗಿ ಶಾಲೆಗೆ ಒಂದು ದಿನ ರಜೆ ನೀಡಲಾಗಿದೆ.