ಬಾಗಲಕೋಟೆ : ವಿಧಾನ ಪರಿಷತ್ ವಿಪಕ್ಷ ನಾಯಕ ಬಿಜೆಪಿಗೆ ಸೇರುತ್ತಾರೆ ಅಂತ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದರು. ಆ ಹೇಳಿಕೆಗೆ ಇದೀಗ ಎಸ್ ಆರ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ನನ್ನ ಬದುಕಿನಲ್ಲೇ, ನನ್ನ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದ ನಿರ್ಧಾರಗಳನ್ನ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಈಶ್ವರಪ್ಪ ಅವರ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ಈಶ್ವರಪ್ಪ ಬಿಜೆಪಿ ಸಿದ್ಧಾಂತಕ್ಕೆ ತಕ್ಕಂತೆ ಅವರ ಪಕ್ಷದಲ್ಲಿದ್ದಾರೆ. ಇಬ್ಬರೂ ಯಾವುದೇ ರೀತಿಯಲ್ಲೂ ವೈರಿಗಳಲ್ಲ. ಇಬ್ಬರು ಜನಸೇವೆಗೆ ಬಂದಿರೋದು. ನಾವೂ ಕಾಂಗ್ರೆಸ್ ನಲ್ಲಿದ್ದುಕೊಂಡು ಮಾಡ್ತೇವೆ. ಅವರು ಬಿಜೆಪಿಯಲ್ಲಿದ್ದುಕೊಂಡು ಸೇವೆ ಮಾಡ್ತಾರೆ.
ಅಭಿವೃದ್ಧಿ ಕೆಲಸ ಮಾಡುವಾಗ ಜೊತೆಯಾಗಿ ಕೆಲಸ ಮಾಡುತ್ತೇವೆ. ಚುನಾವಣೆ ಸಂದರ್ಭದಲ್ಲಿ ಅವರ ಚಡ್ಡಿ ಅವರನ್ನ ಹಿಂಬಾಲ ಮಾಡಿದ್ರೆ ನಮ್ಮ ಚಡ್ಡಿ ನಮ್ಮ ಹಿಂಬಾಲ ಮಾಡುತ್ತೆ ಅಷ್ಟೇ. ಚುನಾವಣೆ ಜನರ ಮೇಲೆಯೇ ನಿಂತಿರುತ್ತೆ. ಅವರಿಗೆ ಆಶೀರ್ವಾದ ಮಾಡಿದರೆ ಅವರು ಇರುತ್ತಾರೆ. ನಮಗೆ ಆಶೀರ್ವಾದ ಮಾಡಿದರೆ ನಾವಿರುತ್ತೇವೆ.
45 ವರ್ಷ ಅಖಂಡವಾಗಿ ಒಂದು ಪಕ್ಷದಲ್ಲಿ ಇದ್ದು, ಒಂದು ಪಕ್ಷದ ಸಿದ್ಧಾಂತವನ್ನು ನಂಬಿಕೊಂಡು ಬಂದಿದ್ದೇನೆ. ಸೈದಾಂತಿಕ ನಿಲುವಿನಲ್ಲಿ ನಮ್ಮ ಮತ್ತು ಅವರ ನಡುವೆ ಒಂದಷ್ಟು ಭಿನ್ನಾಭಿಪ್ರಾಯಗಳಿವೆ. ನನ್ನ ಪಕ್ಷ ಅವಕಾಶ ಕೊಟ್ಟಿದೆ, ಅನೇಕ ಸ್ಥಾನಮಾನಗಳನ್ನು ಕೊಟ್ಟಿದೆ. ಜನಸೇವೆ ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ, ಇಂಥ ಸಮಯದಲ್ಲಿ ಕೇವಲ ಟಿಕೆಟ್ ತಪ್ಪಿದ್ದಕ್ಕೆ ಆ ಪಕ್ಷಕ್ಕೆ ಈ ಪಕ್ಷಕ್ಕೆ ಹೋಗುವುದು ನಮ್ಮ ಜಾಯಮಾನಕ್ಕೆ ಒಪ್ಪುವಂಥದಲ್ಲ ಎಂದಿದ್ದಾರೆ.