ಪ್ರಶಸ್ತಿ ಪಡೆದವರು ಸಾಮಾಜಿಕ ಜವಾಬ್ದಾರಿ ಹೆಚ್ಚಿಸಿಕೊಳ್ಳಬೇಕು : ಶಾಸಕ ಟಿ. ರಘುಮೂರ್ತಿ

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 07 : ಪ್ರತಿಭಾವಂತರನ್ನು ಗುರುತಿಸುವ ಸಹೃದಯವಂತಿಕೆ ಸಮಾಜದಲ್ಲಿ ಬೆಳೆಯಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

ಚಳ್ಳಕೆರೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ರಾಜ್ಯ ಮಟ್ಟದ ವಾಲ್ಮೀಕಿ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಮೈಲಾರ ಶಂಕರ ಸಿರಿ ರಾಜ್ಯ ಪುರಸ್ಕೃತರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಪ್ರಶಸ್ತಿ ಪಡೆದವರು ಸಾಮಾಜಿಕ ಜವಾಬ್ದಾರಿ ಹೆಚ್ಚಿಸಿಕೊಳ್ಳಬೇಕು. ಸಮಾಜಕ್ಕೆ ಮಾದರಿಯಾಗಿ ಬೆಳೆಯಬೇಕು. ಸ್ಥಳೀಯ ಪ್ರತಿಭಾವಂತರನ್ನು ಮುಖ್ಯವಾಹಿನಿಗೆ ತರುವ ಮನಸ್ಸುಗಳು ಹೆಚ್ಚಾಗಬೇಕು. ಬದುಕಿನ ಅನುಭವ ಕಂಡುಕೊಂಡ ಹಿರಿಯರ ಮಾರ್ಗ ಅನುಸರಣೆ ಆಗಬೇಕು. ಇತರರಿಗೆ ಸ್ಪೂರ್ತಿ ರೀತಿಯಲ್ಲಿ ಜೀವನ ಮೌಲ್ಯತೆ ಕಂಡುಕೊಳ್ಳುವ ಚಿಂತನೆ ಇರಬೇಕು ಎಂದು ಹೇಳಿದರು.

ಕವಿ ಕೊರ‍್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಬಯಲುಸೀಮೆಯಾದರೂ ಬುಡಕಟ್ಟು ಆಚರಣೆಗಳ ತೊಟ್ಟಿಲಾಗಿದೆ. ಇಲ್ಲಿ ಮಳೆ ಕೊರತೆಯಿಂದ ಕೃಷಿಕರ ಬದುಕಲ್ಲಿ ಕಣ್ಣೀರಿನ ಕತೆಯಾಗಿ ಕಾಣುತ್ತೇವೆ. ಆದರೂ, ಸಾಹಿತ್ಯ, ಜನಪದ ಮತ್ತು ರಂಗಭೂಮಿ ಕಲಾವಂತಿಕೆಯ ಶ್ರೀಮಂತಿಕೆ ಇದೆ. ತಳುಕು ಮತ್ತು ಬೆಳಗೆರೆ ಮನೆತನದ ಸಾಹಿತ್ಯ ದಿಗ್ಗಜರನ್ನು ಸಾಹಿತ್ಯ ವಲಯದ ಅಶ್ವಿನಿ ದೇವತೆಗಳೆಂದು ಕರೆಯುತ್ತೇವೆ. ಜನಪದ ನೆಲೆಯಲ್ಲಿ ನಾಡೋಜ ಸಿರಿಯಜ್ಜಿ, ಈರಬಡಜ್ಜ, ಸಿರಿಯಮ್ಮ, ಕಾಟಪ್ಪನಹಟ್ಟಿ ಗಿಡ್ಡಜ್ಜ, ಗಿರಿಯಯ್ಯ, ಓಬಳಾಪುರ ಚೌಡಮ್ಮ, ಗರ‍್ಲಕಟ್ಟೆ ಹನುಮಜ್ಜ, ರಂಗಭೂಮಿ ಕಲಾವಿದರಲ್ಲಿ ಗುರುನಾಥಪ್ಪ, ದೊಡ್ಡೀರಪ್ಪ, ಪಿ.ತಿಪ್ಪೇಸ್ವಾಮಿ, ಬುಡ್ನಹಟ್ಟಿ ಅಜ್ಜಪ್ಪ ಹೀಗೆ ಸಾಧಕರ ಹೆಜ್ಜೆ ಗುರುತುಗಳಿವೆ. ಸಮಾಜದ ಮುಖ್ಯವಾಹಿನಿಗೆ ಬರುವ ಪ್ರತಿಭಾವಂತರಲ್ಲಿ ಪ್ರಾದೇಶಿಕ ಸಂಸ್ಕೃತಿ ಚಿಂತನೆ ಇರಬೇಕು. ಸಾಧಕರ ಆದರ್ಶ ಅನುಸರಣೆ ಆಗಬೇಕು. ಪ್ರಶಸ್ತಿ ಪಡೆದವರಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಕಾಳಜಿಯ ಬದ್ದತೆ ಇರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ, ದೇವರ ಎತ್ತುಗಳ ಸಾಕಾಣಿಕೆ ಮಾಡುತ್ತಿರುವ ಕಿಲಾರಿ ಜೋಗಯ್ಯ, ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದ ಪ್ರಗತಿಪರ ರೈತ ಆರ್.ಎ. ದಯಾನಂದಮೂರ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಪೂಜಾರಿ ಹನುಮಂತಪ್ಪ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿ.ಟಿ. ವೀರೇಶ್, ಶಂಕರ ಸಿರಿ ರಾಜ್ಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬೆಳಗೆರೆ ಸುರೇಶ್, ವೀರಶೈವ ಸಮಾಜದ ತಾಲೂಕು ಉಪಾಧ್ಯಕ್ಷೆ ಬಿ.ಎಂ. ಭಾಗ್ಯಮ್ಮ, ಗೊಂಚಿಗಾರ ಬೋರಯ್ಯ, ಸಿ.ವೈ. ಗಂಗಾಧರ ಅವರನ್ನು ಸನ್ಮಾನಿಸಲಾಯಿತು.

 

ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ನಗರಸಭಾ ಅಧ್ಯಕ್ಷೆ ಜೈತುನ್‌ಬಿ, ಸದಸ್ಯರಾದ ಬಿ.ಟಿ. ರಮೇಶ್‌ಗೌಡ, ಸುಜಾತ, ಸಂಘದ ರಾಜ್ಯಾಧ್ಯಕ್ಷ, ಬಂಗ್ಲೆ ಮಲ್ಲಿಕಾರ್ಜುನ ತಾಲೂಕು ಅಧ್ಯಕ್ಷ ಜಾಲಿ ಮಂಜು, ಅನಂತಮೂರ್ತಿ, ಆರ್. ದ್ಯಾಮರಾಜ್, ಡಿ. ವೀರಣ್ಣ, ಇ. ನಾಗರಾಜ, ಸಿ.ಜಿ. ಶ್ರೀನಿವಾಸ್, ಎಸ್.ಬಿ. ತಿಪ್ಪೇಸ್ವಾಮಿ, ಚೌಳೂರು ಪ್ರಕಾಶ, ರಾಜೇಶ್ವರಿ, ಎಸ್. ಮಂಜುಳಮ್ಮ, ಶಂಷದ್‌ಬಾನು, ಪಗಡಲಬಂಡೆ ನಾಗೇಂದ್ರಪ್ಪ, ಮಹಾಂತೇಶ್ ಮತ್ತಿತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *