ಮಂಡ್ಯ: ಆಡಳಿತ ಮಂಡಳಿಯ ಯಡವಟ್ಟಿನಿಂದಾಗಿ ಇಂದು ಮಂಡ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಬಳಿ ಇರುವ ಕಿರಂಗೂರಿನಲ್ಲಿರುವ ಕೇಂಬ್ರಿಡ್ಜ್ ಶಾಲೆ-ಕಾಲೇಜು ಬಂದ್ ಆಗಿದೆ. ಈ ಶಾಲೆಯಲ್ಲಿ ಎಲ್ ಕೆಜಿಯಿಂದ ಹಿಡಿದು ಪಿಯುಸಿವರೆಗೂ ತರಗತಿಗಳಿದ್ದಾವೆ. ಹೀಗಾಗಿ ಈ ಶಾಲೆಯಲ್ಲಿ ಸಾವಿರಾರು ಮಕ್ಕಳು ಕಲಿಯುತ್ತಿದ್ದಾರೆ.
ಈ ಶಾಲೆ ಕಾಂಗ್ರೆಸ್ ಮುಖಂಡ ಹಾರಲಹಳ್ಳಿ ವಿಶ್ವನಾಥ್ ಅವರ ಒಡೆತನದ್ದಾಗಿದೆ. 2017ರಲ್ಲಿ ಶಾಲೆಯ ಕಟ್ಟಡವನ್ನು ಕಟ್ಟುವ ನಿಟ್ಟಿನಲ್ಲಿ ಬೆಂಗಳೂರಿನ ಕೋ ಆಪರೇಟಿವ್ ಬ್ಯಾಂಕ್ ಒಂದರಲ್ಲಿ ಕೋಟ್ಯಾಂತರ ರೂಪಾಯಿ ಸಾಲವನ್ನು ಪಡೆದುಕೊಂಡಿತ್ತು. ಆದರೆ ಇದುವರೆಗೂ ಬ್ಯಾಂಕ್ ಗೆ ಹಣ ಪಾವತಿ ಮಾಡಿಲ್ಲ. ಹೀಗಾಗಿ ಈ ಶಾಲಾ-ಕಾಲೇಜಿಗೆ ಸೀಲ್ ಹಾಕಿ, ಬಂದ್ ಮಾಡಿದ್ದಾರೆ. ಕಳೆದ ಒಂದು ವಾರದ ಹಿಂದೆಯೇ ಬಂದ್ ಮಾಡಲಾಗಿದೆ. ಒಂದು ವಾರದಿಂದ ಮಕ್ಕಳು ಶಾಲೆಗೆ ಬರದೆ ಪರದಾಟ ನಡೆಸುತ್ತಿದ್ದಾರೆ. ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ ಕೂಡ ಹತ್ತಿರದಲ್ಲೇ ಇದೆ. ಇದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಲಿದೆ ಎಂಬ ಆತಂಕ ಪೋಷಕರಲ್ಲಿದೆ.
ಈಗ ಈ ಶಾಲೆಯಲ್ಲಿ ಓದುತ್ತಿದ್ದಂತ ಮಂಡ್ಯದ ಸುತ್ತ ಮುತ್ತಲಿನ ವಿದ್ಯಾರ್ಥಿಗಳ ಜೀವನ ಅತಂತ್ರವಾದಂತೆ ಆಗಿದೆ. ಅದೆಷ್ಟೋ ಮಕ್ಕಳ ಪೋಷಕರು ಸಾಲ ಮಾಡಿ ಶುಲ್ಕ ಕಟ್ಟಿದ್ದಾರೆ. ಆಡಳಿತ ಮಂಡಳಿ ಮಾಡಿರುವ ಸಾಲಕ್ಕೆ ನಮ್ಮ ಮಕ್ಕಳು ಬೆಲೆ ತೆರಬೇಕಾಗಿದೆ. ನಮ್ಮ ಮಕ್ಕಳಿಗ್ಯಾಕೆ ಈ ಶಿಕ್ಷೆ ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಆದಷ್ಟು ಬೇಗ ಶಾಲೆ ಆರಂಭವಾಗಬೇಕು. ನಾವೆಲ್ಲ ಮಕ್ಕಳ ಭವಿಷ್ಯ ಚೆನ್ನಾಗಿರಲಿ ಅಂತ ಸಾಲ ಸೋಲ ಮಾಡಿ ಶುಲ್ಕ ಕಟ್ಟಿದ್ದೇವೆ. ಶಾಲೆ ಮುಚ್ಚುದರೆ ಅರ್ಧದಲ್ಲಿ ಮಕ್ಕಳು ಎಲ್ಲಿ ಹೋಗಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.