ಬಳ್ಳಾರಿ: ಬೀಮ್ಸ್ ನಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಐವರು ಬಾಣಂತಿಯರು ಸಾವನ್ನಪ್ಪಿದ ಪ್ರಕರಣ ಮಾಸುವ ಮುನ್ನವೇ ಇದೀಗ ಶಿಶು ಒಂದು ಸಾವನ್ನಪ್ಪಿದೆ. ಬೀಮ್ಸ್ ಗೆ ನಾರ್ಮಲ್ ಡೆಲಿವರಿಗೆಂದು ಗರ್ಭಿಣಿ ಅಡ್ಮಿಟ್ ಆಗಿದ್ದರು. ಆದರೆ ಇದ್ದಕ್ಕಿದ್ದ ಹಾಗೇ ಸಿಜೆರಿಯನ್ ಮಾಡಿದ್ದರು. ಡೆಲಿವರಿ ಆದ ಮೇಲೆ ಅಮ್ಮ ಮಗು ಚೆನ್ನಾಗಿದ್ದರು. ಆದರೆ ಅರ್ಧ ಗಂಟೆಯಲ್ಲಿಯೇ ಮಗು ಸಾವನ್ನಪ್ಪಿದೆ. ಇದರಿಂದ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಎರಡ್ಮೂರು ವಾರದಲ್ಲಿಯೇ ಐವರು ಬಾಣಂತಿಯರು ಸಾವನ್ನಪ್ಪಿದ ವಿಚಾರ ರಾಜ್ಯದೆಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಐವಿ ಫ್ಲೂಯೆಡ್ ನಿಂದಲೇ ಸರಣಿ ಸಾವನ್ನಪ್ಪಿದ್ದರು. ಸಿರಗುಪ್ಪ ಬಳಿಯ ಸಿರಗೇರದ ಗಂಗೋತ್ರಿ ಎನ್ನುವವರು ಡೆಲಿವರಿಗೆಂದು ಅಡ್ಮಿಟ್ ಆಗಿದ್ದರು. ಈ ಮೊದಲು ಕೂಡ ಗಂಗೋತ್ರಿಗೆ ನಾರ್ಮಲ್ ಡೆಲಿವರಿ ಆಗಿತ್ತು. ಹೀಗಾಗಿ ಈ ಬಾರಿಯೂ ನಾರ್ಮಲ್ ಡೆಲಿವರಿ ಆಗುತ್ತೆ ಅಂತಾನೆ ಅಡ್ಮಿಟ್ ಆಗಿದ್ದರು. ರಾತ್ರಿಯೇ ಪೇನ್ ಬರುವುದಕ್ಕೆ ಶುರುವಾಗಿತ್ತು. ಬೆಳಗ್ಗೆ ಅಷ್ಟರಲ್ಲಿ ತುಂಬಾ ಡೆಲಿವರಿ ಪೇನ್ ಬಂದಿತ್ತು. ಆದರು ನಾರ್ಮಲ್ ಡೆಲಿವರಿ ಮಾಡದೆ, ವೈದ್ಯರು ಸಿಜೆರಿಯನ್ ಮಾಡಿದರು.
ಡೆಲಿವರಿ ಆದ ಮೇಲೆ ವೈದ್ಯರು ಕೂಡ ಮಗು ಚೆನ್ನಾಗಿದೆ ಅಂತಾನೇ ಹೇಳಿದ್ದರು. ಆದರೆ ಅರ್ಧ ಗಂಟೆಗೆ ಮಗು ಸಾವನ್ನಪ್ಪಿದೆ ಎಂದಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಗಂಗೋತ್ರಿಗೆ ಗಂಡು ಮಗು ಜನಿಸಿತ್ತು. ಆದರೆ ವೈದ್ಯರು ಮಗು ಹೊಟ್ಟೆಯಲ್ಲಿ ಮಲ ತಿಂದಿತ್ತು. ಇದರಿಂದ ಶ್ವಾಸಕೋಶಕ್ಕೆ ತೊಂದರೆಯಾಗಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇದನ್ನು ಕುಟುಂಬಸ್ಥರು ಒಪ್ಪುತ್ತಿಲ್ಲ.