ಮಳೆ ನಿಲ್ತಪ್ಪ.. ಕೊಯ್ಲು ಮಾಡಬಹುದಪ್ಪ ಎಂದುಕೊಂಡ ರೈತ, ಕೂಲಿಯಾಳುಗಳು, ಯಂತ್ರಗಳ ಬುಕ್ಕಿಂಗ್ ಮಾಡಿಕೊಳ್ಳುತ್ತಿರುವಾಗಲೇ ಮಂಕಾಗುವಂತೆ ಅಪ್ಪಳಿಸಿದ್ದು ಫೆಂಗಲ್ ಚಂಡಮಾರುತ. ಈ ಫೆಂಗಲ್ ಸೈಕ್ಲೋನ್ ನಿಂದಾಗಿ ತಮಿಳುನಾಡಿ, ಆಂಧ್ರಪ್ರದೇಶ, ಕೇರಳ, ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಾಗಿತ್ತು. ಇದರ ಪರಿಣಾಮ ಕರ್ನಾಟಕದ ಮೇಲೂ ಬಿದ್ದಿದೆ. ಹೀಗಾಗಿ ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಭಾಗದಲ್ಲಿ ಮಳೆ ಸುರಿಯುತ್ತಲೆ ಇದೆ. ಇದು ರೈತರ ಬೆಳೆ ಮೇಲೆ ಪರಿಣಾಮ ಬೀರಿದೆ.
ಇಂದು ಕೂಡ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ ಭಾಗದಲ್ಲಿ ಮಳೆ ಬೀಳಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.
ಅಷ್ಟೇ ಅಲ್ಲ ಕೊಡಗು, ಹಾಸನ, ಮೈಸೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕಲಬುರಗಿ, ಬೆಳಗಾವಿ, ರಾಯಚೂರು, ಬೀದರ್, ಧಾರವಾಡ, ಕೊಪ್ಪಳ, ಹಾವೇರಿ, ಗದಗ ಭಾಗದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಫೆಂಗಲ್ ಚಂಡಮಾರುತದ ಪರಿಣಾಮದಿಂದಾಗಿ ಕಳೆದ ಮೂರ್ನಾಲ್ಕು ದಿನದಿಂದ ರಾಜ್ಯದಲ್ಲಿ ಜಿಟಿಜಿಟಿ ಮಳೆಯಾಗುತ್ತಿತ್ತು. ನಿನ್ನೆಯಿಂದ ಕೊಂಚ ವಿಶ್ರಾಂತಿ ನೀಡಿದ್ದ ಮಳೆರಾಯ ಇಂದು ಮತ್ತೆ ಮಳೆಯ ಸೂಚನೆ ನೀಡಿದೆ. ಬೆಂಗಳೂರಿನ ಹಲವು ಭಾಗಗಳಲ್ಲಿ ಈಗಾಗಲೇ ಮಳೆಯಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇದೇ ರೀತಿ ಮಳೆಯಾಗುತ್ತಿದ್ದರೆ ರೈತರ ಬೆಳೆಗೆ ನಿರೀಕ್ಷಿಸಿದ ಲಾಭ ಬರುವುದಕ್ಕೆ ಸಾಧ್ಯವಾಗುವುದಿಲ್ಲ. ಅದರಲ್ಲೂ ಈಗ ರಾಗಿ ಬೆಳೆಯದ್ದೇ ಎಲ್ಲರಿಗೂ ಚಿಂತೆಯಾಗಿದೆ.