ಮೈಸೂರು: ಮೂಡಾ ಹಗರಣದಲ್ಲಿ ಕೇವಲ ಕಾಂಗ್ರೆಸ್ ನಾಯಕರು ಮಾತ್ರವಲ್ಲ, ಬಿಜೆಪಿ ಹಾಗೂ ಜೆಡಿಎಸ್ ನಾಯಕರದ್ದು ಸೈಟ್ ಗಳಿದ್ದಾವೆ ಎಂಬುದು ಬಾರೀ ಚರ್ಚೆಯಾಗಿತ್ತು. ಇದೀಗ ಸ್ನೇಹಮಯಿ ಕೃಷ್ಣಾ ಅವರು ಬಿಜೆಪಿಗೆ ಸಂಬಂಧಿಸಿದಂತೆಯೇ ಒಂದಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಬಿಜೆಪಿಯ ಗ್ರಾಮಾಂತರ ಅಧ್ಯಕ್ಷ ಮಹದೇವ ಸ್ವಾಮಿ ಹಾಗೂ ಅವರ ಪತ್ನಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ರಿಲೀಸ್ ಮಾಡಿದ್ದಾರೆ.
ಈ ಬಗ್ಗೆ ಸ್ನೇಹಮಯಿ ಕೃಷ್ಣಾ ಅವರೇ ಖಾಸಗಿ ಚಾನೆಲ್ ನಲ್ಲಿ ಮಾತನಾಡಿದ್ದು, ಆರಂಭದಿಂದಾನೂ ನಾನು ಹೇಳುತ್ತಾ ಇದ್ದೀನಿ. ಸಿದ್ದರಾಮಯ್ಯ ಅವರ ಪ್ರಕರಣವನ್ನು ಉದಾಹರಣೆಯಾಗಿಟ್ಟುಕೊಂಡು ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಸರಿಯಾದ ತನಿಖೆ ನಡೆಸಿ ಎಂದು ಹೇಳಿದ್ದೇನೆ.. ಆದರೆ ಕೆಲವೊಬ್ಬರು ನಾನು ಉದ್ದೇಶ ಪೂರ್ವಕವಾಗಿ ಬರೀ ಸಿದ್ದರಾಮಯ್ಯ ವಿರುದ್ಧ, ಕಾಂಗ್ರೆಸ್ ವಿರುದ್ಧ ಆರೋಪ ಮಾಡ್ತಾ ಇದ್ದೀನಿ ಅಂತ ಹೇಳಿದ್ದರು. ಹೀಗಾಗಿಯೇ ಇಂದು ಒಂದು ದಾಖಲೆಯನ್ನು ರಿಲೀಸ್ ಮಾಡಿದ್ದೀನಿ. ಈ ಹಿಂದೆ ಮೈಸೂರು ಪ್ರಾಧಿಕಾರದಲ್ಲಿದ್ದಂತ ನಟೇಶ್ ಅವರು ಹಾಗೂ ಅವರ ಪತ್ನಿ ರಶ್ಮಿ ಅವರು ಪಾಲುದಾರರಾಗಿರುವ ಸಂಸ್ಥೆಯಲ್ಲಿ, ಬಿಜೆಪಿಯ ಗ್ರಾಮಾಂತರ ಅಧ್ಯಕ್ಷ ಮಹದೇವ ಸ್ವಾಮಿ ಹಾಗೂ ಅವರ ಪತ್ನಿ ಸೌಮ್ಯ ಅವರು ಕೂಡ ಅದರ ಪಾಲುದಾರರಾಗುರುವುದು ಕಂಡು ಬಂದಿದೆ. ಹೀಗಾಗಿ ಅವರ ಅಕ್ರಮದಲ್ಲಿ ಇವರು ಭಾಗಿಯಾಗಿದ್ದಾರಾ ಎಂಬುದರ ತನಿಖೆ ನಡೆಸಬೇಕೆಂದು ದಾಖಲೆ ನೀಡಿದ್ದೇನೆ.
ಸಂಸ್ಥೆಯಲ್ಲಿ ಪಾಲುದಾರರಾಗಿದ್ದಾರೆ ಎಂದಾಕ್ಷಣ ಅಕ್ರಮ ಮಾಡಿದ್ದಾರೆಂದು ನಾನು ಹೇಳುತ್ತಿಲ್ಲ. ಆದರೆ ಹಣದ ಮೂಲದ ಬಗ್ಗೆಯೂ ತನಿಖೆಯಾಗಬೇಕು. ನಟೇಶ್ ಅವರು ಮೈಸೂರು ಪ್ರಾಧಿಕಾರದಲ್ಲಿದ್ದಂತ ಸಂದರ್ಭದಲ್ಲಿ ಅವರು ಗಳಿಸಿದ ಹಣವನ್ನು ಅವರ ಹೆಂಡತಿಯ ಮೂಲಕ ಈ ಸಂಸ್ಥೆಗೆ ಹೂಡಿದ್ದಾರೆ. ಇದರ ಬಗ್ಗೆ ತನಿಖೆಯಾಗಬೇಕು ಅನ್ನೋದು ನನ್ನ ಉದ್ದೇಶ ಎಂದಿದ್ದಾರೆ.