ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 02 : ಜಿಲ್ಲೆಯ ಆರು ತಾಲ್ಲೂಕಿನ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಲ್ಲಿನ ಮುಖ್ಯ ಪುಸ್ತಕ ಬರಹಗಾರರು, ಸ್ಥಳೀಯ ಸಮುದಾಯ ಸಂಪನ್ಮೂಲ ಸಖಿಯರು ವೇತನ ಹೆಚ್ಚಳ ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವ-ಸಹಾಯ ಗುಂಪುಗಳ ಒಕ್ಕೂಟಗಳನ್ನು ರಚಿಸಿಕೊಂಡು ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ ಬರುತ್ತಿದ್ದರೂ ವೇತನ ಹೆಚ್ಚಳವಾಗಿಲ್ಲ. ಮುಖ್ಯ ಪುಸ್ತಕ ಬರಹಗಾರರಿಗೆ ಮಾಸಿಕ ಇಪ್ಪತ್ತು ಸಾವಿರ ರೂ. ಸ್ಥಳೀಯ ಸಂಪನ್ಮೂಲ ಸಖಿಯರಿಗೆ ತಿಂಗಳಿಗೆ ಹದಿನೈದು ಸಾವಿರ ರೂ.ಗಳ ವೇತನ ಕೊಡಬೇಕೆಂದು ಪ್ರತಿಭಟನಾನಿರತ ಮಹಿಳೆಯರು ಒತ್ತಾಯಿಸಿದರು.
ಸರ್ಕಾರದಿಂದ ನೇರವಾಗಿ ವೇತನ ಬ್ಯಾಂಕ್ ಖಾತೆಗಳಿಗೆ ಜಮೆಯಾಗಬೇಕು. ವೇತನ ಸಹಿತ ಹೆರಿಗೆ ರಜೆ ಮಂಜೂರು ಮಾಡಬೇಕು. ನಮ್ಮ ಮೇಲೆ ನಡೆಯುತ್ತಿರುವ ಮಾನಸಿಕ ದೌರ್ಜನ್ಯಗಳು ನಿಲ್ಲಲಿ. ಇ.ಎಸ್.ಐ. ಮತ್ತು ಪಿ.ಎಫ್. ಸೌಲಭ್ಯಗಳನ್ನು ನೀಡಬೇಕೆಂದು ಮುಖ್ಯ ಪುಸ್ತಕ ಬರಹಗಾರರು ಹಾಗೂ ಸಖಿಯವರು ಆಗ್ರಹಿಸಿದರು.
ಸುನಿತ, ಅನಿತ, ಮಂಜುಳ, ವನಿತಮ್ಮ, ನಿರ್ಮಲ, ವಿಂದ್ಯಾ, ಉಷ, ತ್ರಿವೇಣಿ, ಸೌಮ್ಯ, ಬಸಮ್ಮ, ರಾಧ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.