ಚಿತ್ರದುರ್ಗ: ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯ ಕೋಡಿ ಬೀಳುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿಯ ಮುಂಗಾರು-ಹಿಂಗಾರು ಮಳೆ ಉತ್ತಮವಾಗಿ ಬಿದ್ದದ್ದರಿಂದ ಜಲಾಶಯ ಕೋಡಿ ಬೀಳುವ ನಿರೀಕ್ಷೆಯೂ ಹೆಚ್ಚಾಗಿತ್ತು. ಆದರೆ ಇನ್ನೇನು ಕೋಡಿ ಬೀಳುತ್ತದೆ ಎನ್ನುವಾಗಲೇ ಮಳೆ ನಿಂತಿತ್ತು. ಆದರೆ ಕೋಡಿಗೆ ಸಮೀಪವಿರುವ ವಾಣಿ ವಿಲಾಸ ಜಲಾಶಯಕ್ಕೆ ಇದೀಗ ಭದ್ರಾ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಈ ಮೂಲಕ ವಾಣಿ ವಿಲಾಸ ಜಲಾಶಯ ಕೋಡಿ ಬೀಳಲು ಕೆಲವೇ ಗಂಟೆಗಳು ಇದಾವೆ. ಕೋಟೆನಾಡಿನ ಮಂದಿ ಈ ಸಂಭ್ರಮಕ್ಕಾಗಿ ಕಾಯುತ್ತಿದ್ದಾರೆ.
ಈ ಬಾರಿ ಜಲಾಶಯ ಕೋಡಿ ಬಿದ್ದರೆ ಇದು ಮೂರನೇ ಬಾರಿ ಕೋಡಿ ಬಿದ್ದಂತೆಯೆ ಸರಿ. ಇಂದಿನ ವರದಿಯಲ್ಲಿ 577 ಕ್ಯೂಸೆಕ್ ಒಳಹರಿವು ಹರಿದು ಬಂದಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 128.65 ಅಡಿ ತಲುಪಿದೆ. ಡ್ಯಾಂ ಕೋಡಿ ಬೀಳುವುದಕ್ಕೆ 1.45 ಅಡಿ ಅಷ್ಟೇ ನೀರು ಬರಬೇಕಿದೆ. ಈ ಬಾರಿ ಜಲಾಶಯ ಕೋಡಿ ಬಿದ್ದರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕರೆಸಿ, ಬಾಗಿನ ಅರ್ಪಿಸುವ ಕಾರ್ಯಕ್ರಮದ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಇನ್ನು ಜಲಾಶಯಕ್ಕೆ 2025ರ ಜನವರಿವರೆಗೂ ಭದ್ರಾ ಜಲಾಶಯದಿಂದ ನೀರು ಹರಿಸುವಂತೆ ಸರ್ಕಾರದ ಆದೇಶವಿದೆ. ಈ ಆದೇಶದ ಪ್ರಕಾರ ಇನ್ನು ಒಂದು ತಿಂಗಳು ಜಲಾಶಯಕ್ಕೆ ನೀರು ಹರಿಯಲಿದೆ. ಆದರೆ ಕೋಡಿ ಬೀಳುವುದಕ್ಕೆ ಇನ್ನು ಕೆಲವೇ ಅಡಿಗಳು ಬಾಕಿ ಇರುವ ಕಾರಣ, ಬಹಳ ಬೇಗನೇ ಜಲಾಶಯ ತುಂಬಲಿದೆ. ಈ ಬಾರಿ ಚಿತ್ರದುರ್ಗ ರೈತರು ಇದೇ ವಿಚಾರಕ್ಕೆ ಫುಲ್ ಖುಷಿಯಾಗಿದ್ದಾರೆ.