ಬೆಂಗಳೂರು: ರೆಸಿಡೆಂಟ್ ವೈದ್ಯರು ಕಾಯುವಷ್ಟು ಕಾಲ ತಾಳ್ಮೆಯಿಂದ ಕಾದು ಈಗ ಬೇಡಿಕೆ ಈಡೇರಿಕೆ ಮಾಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಕೋವಿಡ್ ಕಾಲದಲ್ಲಿ ಇವರು ಸಲ್ಲಿಸಿದಂತ ಅಮೂಲ್ಯ ಸೇವೆಗೆ ಸಿಗಬೇಕಾದ ರಿಸ್ಕ್ ಭತ್ಯೆ ಇನ್ನೂ ಸಿಕ್ಕಿಲ್ಲ. ಹೀಗಾಗಿ ಇಂದು ಒಪಿಡಿ ಬಂದ್ ಮಾಡಿ ಧರಣಿ ಕುಳಿತಿದ್ದಾರೆ.
ಕೋವಿಡ್ ಸಮಯದಲ್ಲಿ ನಿವಾಸಿ ವೈದ್ಯರು ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಆದ್ರೆ ವರ್ಷಗಳೇ ಕಳೆಯುತ್ತಿದ್ದರು ರಿಸ್ಕ್ ಭತ್ಯೆ ಮಾತ್ರ ನೀಡ್ತಿಲ್ಲ. ಕೊರೊನಾ ಚಿಕಿತ್ಸೆ ನೀಡುವ ವಿಚಾರದಲ್ಲೇ ನಿವಾಸಿ ವೈದ್ಯರು ಒಂದೂವರೆ ವರ್ಷ ಕಳೆದಿದ್ದಾರೆ. ಹೀಗಾಗಿ ಅವರಿಗೆ ರಿಸ್ಕ್ ಭತ್ಯೆ ಕೊಡಬೇಕೆಂದು ಸರ್ಕಾರದಿಂದಲೇ ಆದೇಶವಾಗಿದೆ. ಆದ್ರೆ ಭತ್ಯೆ ಮಾತ್ರ ನೀಡ್ತಿಲ್ಲ. ಹೀಗಾಗಿ ರಾಜ್ಯದ 6 ಸಾವಿರ ನಿವಾಸಿ ವೈದ್ಯರು ಧರಣಿ ಮಾಡ್ತಿದ್ದಾರೆ. ಕೋವಿಡ್ ಮತ್ತು ತುರ್ತು ಚಿಕಿತ್ಸೆ ಹೊರತುಪಡಿಸಿ ಒಪಿಡಿ ಬಂದ್ ಮಾಡಿ, ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ್ದಾರೆ.
ದೇಶಾದ್ಯಂತ ಕೊರೊನಾ ಮೂರನೇ ಅಲೆ ಆರಂಭವಾಗುತ್ತಿದೆ. ಎಲ್ಲೆಡೆ ಕೊರಿನಾ ಹೆಚ್ಚಾಗುತ್ತಿದೆ. ಈ ಮಧ್ಯೆ ಕೊರೊನಾ ಸಮಯದಲ್ಲಿ ಸೇವೆ ಮಾಡಿದವರಿಗೆ ಭತ್ಯೆ ಕೊಡದೆ ಇರುವುದು, ಅವರು ಧರಣಿ ಕುಳಿತಿರುವುದು ಇಂಥ ಸಮಯದಲ್ಲಿ ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.