ಸುದ್ದಿಒನ್, ಚಿತ್ರದುರ್ಗ, ನವೆಂಬರ್. 27 : ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ , ಎಸ್‍ಜೆಎಂ ಫಾರ್ಮಸಿ ಕಾಲೇಜು ಮತ್ತು ಐಎಂಎ ಸಹಯೋಗದಲ್ಲಿ ಇಂದು ವಿಶ್ವ ಆಂಟಿಮೈಕ್ರೋಬಿಯಲ್ ಕುರಿತ ಜಾಗೃತಿ ಜಾಥಾವನ್ನು ಆಯೋಜನೆ ಮಾಡಲಾಗಿತ್ತು. ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಂಜಿತ್ ಕುಮಾರ್ ಬಂಡಾರು ಚಾಲನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಜನರಿಗೆ ಆಂಟಿಬಯೋಟಿಕ್ಸ್ ಯಾವ ರೀತಿ ಉಪಯೋಗಿಸಬೇಕು ಎಂದು ಗೊತ್ತಾಗಬೇಕು. ಔಷಧಿ ಬಳಕೆಯಲ್ಲಿ ಮುಂಜಾಗ್ರತೆ ವಹಿಸಬೇಕು. ವೈದ್ಯರ ಸಲಹೆ ಪಡೆದೇ ಉಪಯೋಗಿಸಬೇಕು ಎಂದು ತಿಳಿಸಿದರು.
ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಯವರು ಮಾತನಾಡಿ, ನಾವು ಬೆಳೆದ ಬೆಳೆಗೆ ಯಾವ ರೀತಿ ಕ್ರಿಮಿನಾಶಕ ಹಾಕಬೇಕು ಎಂಬುದರ ಬಗ್ಗೆ ಮಾಹಿತಿ ಇರಬೇಕು ಹಾಗೆಯೆ ನಮ್ಮ ದೇಹಕ್ಕೆ ಯಾವ ರೀತಿಯ ಔಷಧಿ ನೀಡಿದರೆ ಸೂಕ್ತ ಎಂಬುದರ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಗರದ ಪ್ರವಾಸಿಮಂದಿರದಿಂದ ಹಿಡಿದು ಡಿ.ಸಿ ಕಚೇರಿವರೆಗೆ ಜನಸಾಮಾನ್ಯರಿಗೆ ಘೋಷಣೆ ಕೂಗುವುದರ ಮೂಲಕ ಅರಿವು ಮೂಡಿಸಲಾಯಿತ್ತು. ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಡಿ.ಸಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಿಶ್ವ ಆಂಟಿಮೈಕ್ರೋಬಿಯಲ್ ಪ್ರತಿರೋಧಕದ ಬಗ್ಗೆ ತಿಳಿಸಲಾಯಿತು.
ಬಸವೇಶ್ವರ ಆಸ್ಪತ್ರೆಯ ಎಲ್ಲಾ ಬೋಧಕ ಸಿಬ್ಬಂದಿ ಮತ್ತು ಐಎಂಎ ಸಹಯೋಗದೊಂದಿಗೆÉ ಜಿಲ್ಲಾಧಿಕಾರಿಗಳಿಗೆ ಆಂಟಿಬಯೋಟಿಕ್ಸ್ ದುರ್ಬಳಕೆ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಲಾಯಿತು. ಈ ಬಾರಿ ವಿಶ್ವ ಸಂಸ್ಥೆ “ಅರಿಮೂಡಿಸಿ, ಪ್ರತಿಪಾದಿಸಿ, ಕಾರ್ಯಪ್ರವೃತ್ತರಾಗಿ” ಎಂಬ ಮೂರು ಘೋಷಣಾ ವಾಕ್ಯವನ್ನು ವಿದ್ಯಾರ್ಥಿಗಳು ಕೂಗುವುದರ ಮೂಲಕ ಇದರ ಬಗ್ಗೆ ಜಾಗೃತಿ ಮೂಡಿಸಿದರು.
ಜಾಥದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ.ರಾಜೇಶ್, ಡಾ.ನಾಗೇಂದ್ರಗೌಡ, ಡಾ. ಸುಧೀಂದ್ರ, ಡಾ.ಶುಭ, ಐಎಂಎ ಅಧ್ಯಕ್ಷರಾದ ಡಾ.ಪಾಲಾಕ್ಷಪ್ಪ, ಕಾರ್ಯದರ್ಶಿ ಡಾ.ಪ್ರಹ್ಲಾದ್, ಎಸ್‍ಜೆಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಸೇರಿದಂತೆ ಎಲ್ಲಾ ಬೋಧಕ ಸಿಬ್ಬಂದಿ ವರ್ಗದವರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು, ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.