ಮೈಸೂರು: ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ದೇವರಾಜ್ ಅವರ ಮಗಳು ಈ ದೂರು ದಾಖಲಿಸಿದ್ದಾರೆ. ಕೆಸರೆ ಗ್ರಾಮದ ಸರ್ವೇ ನಂಬರ್ 464ರ 3.16 ಎಕರೆ ಜಾಗ ಸಂಬಂಧ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಜಮುನಾ ತನಗೆ ಇದರಲ್ಲಿ ಪಾಲು ಬರಬೇಕೆಂದು ದಾವೆ ಹೂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಧರ್ಮ ಪತ್ನಿ ಪಾರ್ವತಿ ಅವರ ಹೆಸರು ಸೇರಿದಂತೆ 12 ಜನರ ವಿರುದ್ದ ದೂರು ದಾಖಲಿಸಿದ್ದಾರೆ. ಸಿಎಂ ಬಾಮೈದ ಹಾಗೂ ಸ್ವಂತ ದೊಡ್ಡಪ್ಪ ದೇವರಾಜು ಹಾಗೂ ಕುಟುಂಬಸ್ಥರ ಮೇಲೂ ದೂರು ದಾಖಲಾಗಿದೆ. ಮಂಜುನಾಥ್ ಸ್ವಾಮಿ, ಜೆ.ದೇವರಾಜ್, ಸರೋಜಮ್ಮ, ಡಿ.ಶೋಭಾ, ಡಿ.ದಿನಕರ್, ಡಿ.ಪ್ರಭಾ, ಡಿ.ಪ್ರತಿಭಾ, ಡಿ.ಶಶಿಧರ್, ಬಿ.ಎಂ.ಮಲ್ಲಿಕಾರ್ಜುನ್ ಸ್ವಾಮಿ, ಡಿ.ಎನ್.ಪಾರ್ವತಿ, ನೂಡಾ ಮಾಜಿ ಆಯಿಕ್ತ, ಮಾಜಿ ಜಿಲ್ಲಾಧಿಕಾರಿ ವಿರುದ್ಧ ದೂರು ದಾಖಲಾಗಿದೆ.
ಮೈಲಾರಯ್ಯ ಅವರ ಪುತ್ರಿ ಜಮುನಾ. ದೇವರಾಜ್ ಅವರ ಸಹೋದರ ಈ ಮೈಲಾರಯ್ಯ. ಈಗ ಮೂಡಾ ಹಗರಣದಲ್ಲಿ ದೇವರಾಜ್ ಅವರು ಆಸ್ತಿಯನ್ನು ಮಾರಿದ್ದಾರೆ. ನಾವೂ ನಾಲ್ಕು ತಿಂಗಳ ಹಿಂದರ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದೇವೆ. ನಮಗೆ ದೇವರಾಜು ಅವರು ದೊಡ್ಡಪ್ಪ ಆಗಬೇಕು. ಅಜ್ಜನ ಜಮೀನು ಇತ್ತು ಎಂಬುದೇ ನಮಗೆ ಗೊತ್ತಿರಲಿಲ್ಲ. ನಮ್ಮ ತಂದೆ ತೀರಿ ಹೋಗಿ 35 ವರ್ಷಗಳಾಗಿವೆ. ಮೂಡಾ ಹಗರಣ ಬೆಳಕಿಗೆ ಬಂದ ಮೇಲೆ ನಮ್ಮ ತಾತನಿಗೆ ಆಸ್ತಿ ಇತ್ತು ಎಂಬುದು ಗೊತ್ತಾಗಿದೆ. ಜಮೀನು ಮಾರಾಟ ಮಾಡುವಾಗ ನಮ್ಮ ದೊಡ್ಡಪ್ಪ ನಮ್ಮ ಗಮನಕ್ಕೆ ತಂದಿಲ್ಲ. ನಮ್ಮ ಹೆಸರನ್ನು ಬಿಟ್ಟು ಮಾರಾಟ ಮಾಡಿದ್ದಾರೆಂದು ದೂರಿದ್ದಾರೆ.