ಸುದ್ದಿಒನ್ | ಬಾರ್ಡರ್ ಗವಾಸ್ಕರ್ ಟ್ರೋಫಿಯ ಅಂಗವಾಗಿ ಪ್ರವಾಸಿ ಟೀಮ್ ಇಂಡಿಯಾ ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಆತಿಥೇಯ ತಂಡ 295 ರನ್‌ಗಳ ಅಂತರದಿಂದ ಸೋತಿದೆ.
534 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಆಸ್ಟ್ರೇಲಿಯಾ 238 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಇದು ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾಗೆ ಸಿಕ್ಕ ಅತಿ ದೊಡ್ಡ ಟೆಸ್ಟ್ ಗೆಲುವು. ಇದಕ್ಕೂ ಮುನ್ನ 1977ರಲ್ಲಿ ಮೆಲ್ಬೋರ್ನ್‌ನಲ್ಲಿ ಟೀಂ ಇಂಡಿಯಾ 222 ರನ್‌ಗಳ ಜಯ ಸಾಧಿಸಿತ್ತು. ಸರಿಯಾಗಿ 47 ವರ್ಷಗಳ ನಂತರ ಇದೀಗ ಟೀಂ ಇಂಡಿಯಾ ಹೊಸ ಇತಿಹಾಸ ಸೃಷ್ಟಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 150 ರನ್‌ಗಳಿಗೆ ಆಲೌಟ್ ಆಗಿತ್ತು. ಅದರ ನಂತರ, ಆಸ್ಟ್ರೇಲಿಯಾವನ್ನು ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸಲಾಯಿತು. ಕೇವಲ 104 ರನ್‌ಗಳಿಗೆ ಕುಸಿದಿತ್ತು. ಈ ಮೂಲಕ ಭಾರತ ಮೊದಲ ಇನಿಂಗ್ಸ್‌ನಲ್ಲಿ 46 ರನ್‌ಗಳ ಮಹತ್ವದ ಮುನ್ನಡೆ ಸಾಧಿಸಿತು. ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಅಮೋಘ ಪ್ರದರ್ಶನ ನೀಡಿದರು. ಅದರಲ್ಲೂ ಯುವ ಆರಂಭಿಕ ಆಟಗಾರ ಯಶಸ್ವಿ ಜೈಶ್ವಾಲ್ (161) ಮತ್ತು ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (100) ಶತಕ ಸಿಡಿಸಿದ್ದರು. ಕೆಎಲ್ ರಾಹುಲ್ (77) ಕೂಡ ಅರ್ಧಶತಕದೊಂದಿಗೆ ಮಿಂಚಿದರು. ಇದರೊಂದಿಗೆ ಟೀಂ ಇಂಡಿಯಾ 487/6ಕ್ಕೆ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
534 ರನ್ ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಆಸ್ಟ್ರೇಲಿಯಾ ಯಾವ ಹಂತದಲ್ಲೂ ಗೆಲ್ಲುವ ಲಕ್ಷಣ ಕಾಣಲಿಲ್ಲ. ಮೂರನೇ ದಿನ ಸುಮಾರು 30 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ ಆಸೀಸ್ ತಂಡ ಮೂರು ನಿರ್ಣಾಯಕ ವಿಕೆಟ್ ಕಳೆದುಕೊಂಡಿತು. 12/3 ರನ್ ಗಳಿದ್ದಾಗ
ನಾಲ್ಕನೇ ದಿನ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ 238 ರನ್‌ಗಳಿಗೆ ಆಲೌಟ್ ಆಯಿತು. ಸ್ಟೀವ್ ಸ್ಮಿತ್ ಎರಡನೇ ಇನ್ನಿಂಗ್ಸ್‌ನಲ್ಲಿ ನಿರಾಸೆ ಮೂಡಿಸಿದರು. ಟ್ರಾವಿಸ್ ಹೆಡ್ 89 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮಿಚೆಲ್ ಮಾರ್ಷ್ (47) ನಿರಾಸೆ ತೋರಿದರು. ಭಾರತದ ಬೌಲರ್‌ಗಳ ಪೈಕಿ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಬುಮ್ರಾ ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದು ತಮ್ಮ ಶಕ್ತಿ ಪ್ರದರ್ಶಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿದ ಎಲ್ಲಾ ಐವರು ಭಾರತೀಯ ಬೌಲರ್‌ಗಳು ವಿಕೆಟ್ ಪಡೆದರು ಎಂಬುದು ಗಮನಾರ್ಹ.
ಈ ಪಂದ್ಯದ ಗೆಲುವಿನೊಂದಿಗೆ ಭಾರತ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಡಿಸೆಂಬರ್ 6 ರಿಂದ ಅಡಿಲೇಡ್ ಮೈದಾನದಲ್ಲಿ ಆರಂಭವಾಗಲಿದೆ. ಏತನ್ಮಧ್ಯೆ, ಕಳೆದ ಎರಡು ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಭಾರತ 2-1 ರಿಂದ ಗೆದ್ದುಕೊಂಡಿತ್ತು. ಈ ಬಾರಿಯೂ ಅದೇ ಗುರಿಯೊಂದಿಗೆ ಕಣಕ್ಕೆ ಇಳಿದಿದ್ದಾರೆ. ನಿರೀಕ್ಷೆಯಂತೆ ಸರಣಿಗೆ ಈ ಗೆಲುವಿನಿಂದ ಉತ್ತಮ ಆರಂಭ ದೊರೆತಂತಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೂ ಮುನ್ನ ಟೀಂ ಇಂಡಿಯಾಗೆ ಇದು ಕೊನೆಯ ಟೆಸ್ಟ್ ಸರಣಿಯಾಗಿದೆ. ಇದರಲ್ಲಿ ಭಾರತ 4-0 ಅಂತರದಲ್ಲಿ ಗೆದ್ದರೆ, ಇತರ ತಂಡಗಳ ಫಲಿತಾಂಶವನ್ನು ಲೆಕ್ಕಿಸದೆ ಭಾರತ ಸತತ ಮೂರನೇ ಬಾರಿಗೆ ಫೈನಲ್ ತಲುಪಲಿದೆ. ಪರ್ತ್ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ ಭಾರತ WTC ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿತು.