ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ನ. 22 : ಉಪನ್ಯಾಸಕರು ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ, ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರು ಬಿಜೆಪಿ ಸದಸ್ಯತ್ವ ಅಭಿಯಾನದ ಉಸ್ತುವಾರಿಗಳಾದ ದತ್ತಾತ್ರೇಯರವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ನೂತನ ಸೇರ್ಪಡೆಯಾಗಿದ್ದಾರೆ.
ಶ್ರೀ ಯೋಗೀಶ್ ಸಹ್ಯಾದ್ರಿ, ಇವರು ಚಿತ್ರದುರ್ಗದ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಅಧ್ಯಕ್ಷರಾಗಿದ್ದು, ವೃತ್ತಿಯಲ್ಲಿ ಇಂಗ್ಲಿಷ್ ಭಾಷಾ ಉಪನ್ಯಾಸಕರಾಗಿದ್ದಾರೆ. ರಾಜ್ಯದ ಮೂಡಬಿದಿರೆಯ ಆಳ್ವಾಸ್ ಕಾಲೇಜು, ಸೈಂಟ್ ಅಲೋಶಿಯಸ್ ಕಾಲೇಜು ಹಾಗೂ ಚಿತ್ರದುರ್ಗ ಸೇರಿದಂತೆ ಅನೇಕ ಪಿಯು ಕಾಲೇಜುಗಳಲ್ಲಿ ಇಂಗ್ಲಿಷ್ ಉಪನ್ಯಾಸಕರು, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ ಮೂಲಕ ಜಿಲ್ಲೆಯ ಸರ್ಕಾರಿ ಶಾಲೆ-ಕಾಲೇಜುಗಳು, ಸ್ಲಂ ಪ್ರದೇಶ ಹಾಗೂ ಹಾಸ್ಟೆಲ್ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್ ಕಲಿಸಿಕೊಡುತ್ತಿದ್ದಾರೆ.
ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡುತ್ತಿರುವ ಇವರು “ಕಣ್ಣು ಕವನದ ಮುನ್ನುಡಿ”, “ದ ಹಿಲ್ಸ್ ಅಲೈವ್” ಮತ್ತು “ಅಡ್ವಾನ್ಸ್ಡ್ ಇಂಗ್ಲಿಷ್ ಗ್ರಾಮರ್” ಎಂಬ 3 ಕೃತಿಗಳನ್ನು ರಚಿಸಿದ್ದು, ಚಿತ್ರದುರ್ಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಖ್ಯಾತಿ ಪಡೆದಿವೆ. ಸ್ವತಃ ಕವಿಗಳೂ, ಸಾಹಿತಿಗಳೂ ಆಗಿರುವ ಇವರು ಪ್ರಸ್ತುತ ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ 500 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಆಯೋಜಿಸಿದ್ದಾರೆ. ಇತ್ತೀಚೆಗೆ ಚಿತ್ರದುರ್ಗ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕುರುಬ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 537ನೇ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ‘ಕನಕಶ್ರೀ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್ ನಗರಾಧ್ಯಕ್ಷ ನವೀನ್ ಚಾಲುಕ್ಯ ಭಾಗವಹಿಸಿದ್ದರು.