ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 21 : ರೈತರ ಸ್ವಾಧೀನದಲ್ಲಿರುವ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಸರ್ಕಾರ ಕಸಿಯಲು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬೇಡಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಗಡಲಪುರ ನಾಗೇಂದ್ರ ಆಳುವ ಸರ್ಕಾರಕ್ಕೆ ಎಚ್ಚರಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ರೈತ ಹೋರಾಟಗಾರ ಟಿ.ನುಲೇನೂರು ಶಂಕರಪ್ಪನವರ ನೆನಪು ಕಾರ್ಯಕ್ರಮದಲ್ಲಿ ಶಂಕ್ರಣ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಟಿ.ನುಲೇನೂರು ಶಂಕರಪ್ಪನವರದು ಅಪರೂಪದ ವ್ಯಕ್ತಿತ್ವ. ಎಲ್ಲಿಯೇ ರೈತರ ಮೇಲೆ ದೌರ್ಜನ್ಯ, ದಬ್ಬಾಳಿಕೆಯಾಗಲಿ ಅಲ್ಲಿ ಹೋರಾಟಕ್ಕೆ ಮುಂದಿರುತ್ತಿದ್ದರು.
ಹಸಿರು ಟವಲ್‍ಗೆ ಧಕ್ಕೆಯಾಗಿದೆ. ಹೆಗಲ ಮೇಲೆ ಹಸಿರು ಟವಲ್ ಹಾಕಿಕೊಂಡು ಅನೇಕರು ಮರಳು ದಂಧೆ ಸೇರಿದಂತೆ ಅನೇಕ ಅಕ್ರಮಗಳಲ್ಲಿ ತೊಡಗಿರುವುದು ನಮ್ಮ ಗಮನಕ್ಕೆ ಬಂದಿದೆ. ಜಾತಿ ಧರ್ಮ ಎತ್ತಿಕಟ್ಟಿ ಸಮಾಜ ಹೊಡೆಯುವ ಇಂದಿನ ಪರಿಸ್ಥಿತಿಯಲ್ಲಿ ರೈತರ ಮೇಲೆ ಮಹತ್ತರ ಜವಾಬ್ದಾರಿಯಿದೆ ಎಂದು ಹೇಳಿದರು.
ಶಂಕರಪ್ಪನವರಂತ ನೂರಾರು ರೈತರನ್ನು ಹುಟ್ಟುಹಾಕಿ ಚಳುವಳಿಗೆ ಶಕ್ತಿ ತುಂಬಬೇಕಿದೆ. ಹಸಿರು, ನೀಲಿ, ಕೆಂಪು ಟವಲ್ ಜೊತೆಗೂಡಿ ಕೆಲಸ ಮಾಡುತ್ತಿದೆ. ರೈತ ಚಳುವಳಿಗೆ ಭೌತಿಕ ಶಕ್ತಿ ತುಂಬಬೇಕಿದೆ. ಚಳುವಳಿಯ ಮೇಲೂ ಧಾರ್ಮಿಕ ಭಾವನೆ ಬೀರುತ್ತಿರುವುದು ನೋವಿನ ಸಂಗತಿ. ಮಧ್ಯ ಕರ್ನಾಟಕದ ಬಯಲು ಸೀಮೆ ಚಿತ್ರದುರ್ಗಕ್ಕೆ ಭದ್ರಾಮೇಲ್ದಂಡೆ ಯೋಜನೆಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಕೂಡಲೆ ಬಿಡುಗಡೆಗೊಳಿಸಬೇಕು.
ಕಾಮಗಾರಿ ಪೂರ್ಣಗೊಂಡಾಗ ಕಾಲುವೆಗೆ ಟಿ.ನುಲೇನೂರು ಶಂಕರಪ್ಪನವರ ಹೆಸರಿಡುವಂತೆ ಒತ್ತಾಯಿಸಿದ ಬಗಡಲಪುರ ನಾಗೇಂದ್ರ ರಾಜಕೀಯವಾಗಿಯೂ ರೈತ ಚಳುವಳಿ ಶಕ್ತಿಯುತವಾಗಬೇಕಾಗಿರುವುದರಿಂದ ಪ್ರತಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿಯೂ ರೈತರು ಗೆಲ್ಲಬೇಕು. ಬೇರೆ ಸಂಘಟನೆ, ಎಡ ಪಂಥೀಯ ಜೊತೆ ನಾವು ಗುರುತಿಸಿಕೊಂಡಿದ್ದೇವೆ. ರೈತ ಚಳುವಳಿಯನ್ನು ಆಂತರಿಕ, ವೈಚಾರಿಕ ದೃಷ್ಟಿಕೋನದಿಂದ ಕೊಂಡೊಯ್ಯೋಣ ಎಂದರು.
ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿ ಎಲ್ಲರೊಡನೆಯೂ ಉತ್ತಮ ಒಡನಾಟವಿಟ್ಟುಕೊಂಡಿದ್ದ ಟಿ.ನುಲೇನೂರು ಶಂಕರಪ್ಪ ರೈತ ಪರ ಚಳುವಳಿ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದರು. ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗಕ್ಕೆ ಭದ್ರಾಮೇಲ್ದಂಡೆ ಯೋಜನೆಗಾಗಿ ನಡೆದ ಎಲ್ಲಾ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿರುತ್ತಿದ್ದ ಶಂಕರಪ್ಪನವರಿಗೆ ಜಿಲ್ಲೆಗೆ ನೀರು ಹರಿಸಬೇಕೆಂಬ ಆಸೆಯಿತ್ತು. ಆದರೆ ವಿಧಿ ಇಷ್ಟು ಬೇಗೆ ಸೆಳೆದುಕೊಳ್ಳುತ್ತದೆಂದು ನಾವುಗಳ್ಯಾರು ಊಹಿಸಿರಲಿಲ್ಲ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರುಗಳಾದ ಶಿವಾನಂದಕುಗ್ವೆ, ಗೋವಿಂದರಾಜು,
ರಾಜ್ಯ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಸಿ.ಪಿ.ಐ.ಮುಖಂಡ ಜಿ.ಸಿ.ಸುರೇಶ್‍ಬಾಬು, ಕಮಲಮ್ಮ ನುಲೇನೂರು ಎಂ.ಶಂಕರಪ್ಪ, ರಾಜ್ಯ ಮಹಿಳಾ ಉಪಾಧ್ಯಕ್ಷೆ, ಮಂಜುಳ ಹಕ್ಕಿ, ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ವೇದಿಕೆಯಲ್ಲಿದ್ದರು.
ಹಂಪಯ್ಯನಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ಷಣ್ಮುಖ, ಅಹೋಬಲಪತಿ, ಕೆ.ಆರ್.ದಯಾನಂದ್, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕೆ.ಸಿ.ಹೊರಕೇರಪ್ಪ, ದಸ್ತಗಿರಿಸಾಬ್, ರೈತ ಮಹಿಳೆ ಸುಧಾ ಡಿ.ಎಸ್.ಹಳ್ಳಿ, ನಿವೃತ್ತ ಡಿ.ವೈ.ಎಸ್ಪಿ.ಗಳಾದ ಮಹಂತರೆಡ್ಡಿ, ಅಬ್ದುಲ್‍ರೆಹಮಾನ್, ಸೈಯದ್ ಇಸಾಖ್ ಸೇರಿದಂತೆ ಟಿ.ನುಲೇನೂರು ಶಂಕರಪ್ಪನವರ ಅಪಾರ ಅಭಿಮಾನಿಗಳು ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.