ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 17 : ವಚನ ಚಳುವಳಿಯ ಕೊಡುಗೆಯಿಂದ ಕನ್ನಡ ಸಂಸ್ಕೃತಿ ಸಮೃದ್ದವಾಗಿದೆ ಎಂದು ಪ್ರೊ.ಜಿ.ಪರಮೇಶ್ವರಪ್ಪ ಹೇಳಿದರು.
ಪುಣ್ಯಕೋಟಿ ಪ್ರಕಾಶನ ಮತ್ತು ಕ್ಯಾತಲಿಂಗೇಶ್ವರ ವಕ್ಕಲು ಬಳಗದ ವತಿಯಿಂದ ಪಿ.ಬಸವರಾಜಪ್ಪನವರ ಅನುಭವ ಚಿಂತಾಮಣಿ ವಚನ ಹೊತ್ತಿಗೆಯನ್ನು ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಬಿಡುಗೆಗೊಳಿಸಿ ಮಾತನಾಡಿದರು.
ಸಾಮಾನ್ಯ ವ್ಯಕ್ತಿಗಳು ತಮ್ಮ ಜೀವನಾನುಭವಗಳನ್ನು ವಚನಗಳ ಮೂಲಕ ಸಾರ್ವಜನಿಕರಿಗೆ ನೀಡಿದ ಚಳುವಳಿಯೆ ವಚನ ಚಳುವಳಿ. ಅಂತಹ ಚಳುವಳಿಯ ಮುಂದುವರಿಕೆ ಈಗ ಸಾಕಾರಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು. ವಚನಗಳ ಜೀವಪರ, ನಿಸರ್ಗ ಹಾಗೂ ಪ್ರಗತಿಪರ ದೋರಣೆಯೂ ಕೃತಿಯಲ್ಲಿ ಸಮರ್ಥವಾಗಿ ಅನಾವರಣಗೊಂಡಿದೆ ಎಂದರು.
ವಿಶ್ರಾಂತ ಪ್ರಾಚಾರ್ಯರು ಹಾಗೂ ಸಾಹಿತಿ ಡಾ.ಸಿ.ಶಿವಲಿಂಗಪ್ಪ ಮಾತನಾಡುತ್ತ ತೀರ ಸರಳ ಸಾಮಾನ್ಯ ಮನುಷ್ಯ ಬಿ.ಬಸವರಾಜಪ್ಪ ಅಪಾರವಾಗಿ ಗಳಿಸಿದ ಅನುಭವಗಳನ್ನು ವಚನಗಳ ಮೂಲಕ ಅಭಿವ್ಯಕ್ತಿಗೊಳಿಸಿರುವುದರ ಹಿಂದೆ ಅವರ ಪರಿಶ್ರಮ ಮತ್ತು ಗಟ್ಟಿಯಾದ ಸತ್ವವಿದೆ. ನೀತಿ, ಧರ್ಮ, ಸಂಸ್ಕøತಿ ಹಾಗೂ ಜೀವನ ಪಾಠಗಳ ಜೊತೆ ವಚನ ಚಳುವಳಿಯ ಆಶಯಗಳಿವೆ. ಹಾಗಾಗಿ ಈ ಕೃತಿ ವಚನ ಪರಂಪರೆಯ ಮುಂದುವರಿಕೆ ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಹೊತ್ತಿಗೆ ಕುರಿತು ಮಾತನಾಡಿ ಪಿ.ಬಸವರಾಜಪ್ಪನವರ ಅನುಭವ ಚಿಂತಾಮಣಿ ವಚನ
ಹೊತ್ತಿಗೆ ವಚನ ಚಳುವಳಿಯಲ್ಲಿ ಒಂದು ಮೈಲಿಗಲ್ಲು. ನಮ್ಮ ಮಧ್ಯೆ ಆಗಿ ಹೋಗಿರುವ ಅನೇಕ ಆಧ್ಯಾತ್ಮಿಕ ವ್ಯಕ್ತಿಗಳಿಗಿಂತ ಜೀವನದಲ್ಲಿ ಕಂಡು ಕೇಳಿ ಅನುಭವಿಸಿದ ಎಷ್ಟೋ ವಿಷಯಗಳನ್ನು ವಚನಗಳ ಮೂಲಕ ಕೃತಿಯಲ್ಲಿ ನೀಡಿದ್ದಾರೆಂದು ಶ್ಲಾಘಿಸಿದರು.
ನಿವೃತ್ತ ಲೆಕ್ಕಾಧಿಕಾರಿ ಬಿ.ನಾಗರಾಜ್, ಕೃತಿಕಾರ ಪಿ.ಬಸವರಾಜಪ್ಪ ವೇದಿಕೆಯಲ್ಲಿದ್ದರು.ಭಾರತಿ ರುದ್ರಸ್ವಾಮಿ ಪ್ರಾರ್ಥಿಸಿದರು. ಶಿಕ್ಷಕ ಬೆಳೆಗೆರಪ್ಪ ಸ್ವಾಗತಿಸಿದರು. ಬಸವರಾಜಪ್ಪ ವಂದಿಸಿದರು. ಶಿಕ್ಷಕ ರುದ್ರಸ್ವಾಮಿ ಹರ್ತಿಕೋಟೆ ನಿರೂಪಿಸಿದರು.