ಸುದ್ದಿಒನ್, ಚಿತ್ರದುರ್ಗ, ನವೆಂಬರ್. 17 : ಇತ್ತೀಚೆಗಂತೂ ಚಿರತೆ ಹಾವಳಿ ಜಾಸ್ತಿಯಾಗಿದೆ. ಹಲವು ಜಿಲ್ಲೆಗಳಲ್ಲಿ ಚಿರತೆಯ ಉಪಟಳ ಜಾಸ್ತಿಯಾಗಿದೆ. ಕುರಿ, ಮೇಕೆಗಳನ್ನು ತಿಂದು, ಆತಂಕ ತಂದೊಡ್ಡುತ್ತಿವೆ. ಚಿತ್ರದುರ್ಗ ಜಿಲ್ಲೆಯಲ್ಲೂ ಚಿರತೆಯೊಂದು ಬಹಳ ದಿನಗಳಿಂದ ಜನರನ್ನು ಆತಂಕಕ್ಕೀಡು ಮಾಡಿತ್ತು. ಜನ ಓಡಾಡುವುದಕ್ಕೇನೆ ಭಯ ಪಟ್ಟಿದ್ದರು. ಇದೀಗ ಆ ಚಿರತೆಗೆ ಮುಕ್ತಿ ಸಿಕ್ಕಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆಹಿಡಿದಿದ್ದಾರೆ.
ತಾಲ್ಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ ಚಿರತೆಯ ಓಡಾಟವಿತ್ತು. ಗ್ರಾಮದ ಹನುಮಂತಪ್ಪ ಎಂಬುವವರ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿದ್ದರು. ಈ ಬೋನಿಗೆ ಚೊರತೆ ಬಿದ್ದಿದೆ. ಅರಣ್ಯ ಇಲಾಖೆ ಅಧಿಕಾರಿ ಪ್ರದೀಪ್ ಕೇಸರಿ ನೇತೃತ್ವದಲ್ಲಿ ಚಿರತೆಯನ್ನು ಸೆರೆಹಿಡಿದು, ಆಡು ಮಲ್ಲೇಶ್ಚರ ಕಿರು ಮೃಗಾಲಯಕ್ಕೆ ಬಿಡಲಾಗಿದೆ. ಚಿರತೆ ಸೆರೆಯಿಂದಾಗಿ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇತ್ತೀಚೆಗೆ ಚಿರತೆ ಉಪಟಳದ ಸುದ್ದಿ ಕೇವಲ ಚಿತ್ರದುರ್ಗದ ಮಾತ್ರವಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಆತಂಕ ಮನೆ ಮಾಡಿದೆ. ಚಿರತೆಗಳು ಹೀಗೆ ಬಂದಿರುವುದಾದರೂ ಎಲ್ಲಿಂದ ಎಂಬ ಪ್ರಶ್ನೆ ಕಾಡುತ್ತಿದೆ. ಜನರಂತು ಚಿರತೆಯಿಂದ ಭಯಭೀತರಾಗಿದ್ದಾರೆ. ಹೊಲ, ಗದ್ದೆಗಳಿಗೆ ಒಬ್ಬೊಬ್ಬರೆ ಓಡಾಡುವುದಕ್ಕೂ ಜನರಿಗೆ ಧೈರ್ಯ ಸಾಕಾಗುತ್ತಿಲ್ಲ. ಚಿರತೆ ದಾಳಿ ಮಾಡಿದರೆ ಏನು ಕಥೆ ಎಂಬ ಭಯದಲ್ಲಿಯೇ ಇದ್ದಾರೆ. ಚಿತ್ರದುರ್ಗದ ಮಂದಿಗೂ ಅದೇ ಆತಂಕವಿತ್ತು. ರೈತರಿಗಂತು ಚಿರತರ ಯಾವಾಗ ಸೆರೆಯಾಗುತ್ತೋ ಎಂಬ ಆತಂಕ ಮನೆ ಮಾಡಿತ್ತು. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಹಾಕಿ ಚಿರತೆಯನ್ನು ಹಿಡಿದಿದ್ದಾರೆ. ಕಾಡುಗಳೆಲ್ಲ ನಾಶವಾಗುತ್ತಿರುವುದಕ್ಕೆ ನಾಡಿನತ್ತ ಅದೆಷ್ಟೋ ಪ್ರಾಣಿಗಳು ಆಹಾರ ಅರಸಿಯೋ, ದಟ್ಟ ಪ್ರದೇಶ ಹುಡುಕಿಯೋ ಬರುತ್ತಿವೆ. ಹಾಗೇ ಬಂದ ಚಿರತೆಗಳು ಊರುಗಳ ನಡುವೆ ಸಿಲುಕಿ, ಜನರಿಗೂ ಭಯ ಹುಟ್ಟಿಸುತ್ತಿವೆ.