ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ ಮೂವರು ಬಾಣಂತಿಯರು ಪ್ರಾಣ ಬಿಟ್ಟ ಘಟನೆ ನಡೆದಿದೆ. ಈ ಘಟನೆ ನಡೆದು ನಾಲ್ಕು ದಿನಗಳಾಗಿದ್ದು ಈಗ ಬೆಳಕಿಗೆ ಬಂದಿದೆ. ಇದು ಎಲ್ಲರಿಗೂ ಶಾಕ್ ನೀಡಿದೆ. ನವೆಂಬರ್ 10 ರಂದು ಏಳು ಬಾಣಂತಿಯರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅದರಲ್ಲಿ ಈಗಾಗಲೇ ಮೂವರು ಸಾವನ್ನಪ್ಪಿದ್ದಾರೆ. ಇದ್ದಕ್ಕಿದ್ದಂತೆ ಬಾಣಂತಿಯರು ಕಣ್ಣು ಮುಚ್ಚಿದ್ದು, ಕುಟುಂಬಸ್ಥರಿಗೂ ಶಾಕ್ ಆಗಿದೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ, ಮೆಡಿಸಲ್ ರಿಯಾಕ್ಷನ್ ನಿಂದಾಗಿಯೇ ಈ ದುರಂತ ನಡೆದಿದೆ ಎನ್ನಲಾಗಿದೆ.
ಇನ್ನು ನವೆಂಬರ್ 10ರಂದು ಲಲಿತಮ್ಮ ಹಾಗೂ ನಂದಿನಿ ಎಂಬಿಬ್ಬರು ಮಹಿಳೆಯರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಸಿಜೆರಿಯನ್ ಕೂಡ ಮಾಡಿದರು. ಆದರೆ ಸಿಜೆರಿಯನ್ ಆದ ಬಳಿಕ ಅಂದೇ ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಮಕ್ಕಳು ಅನಾಥರಾಗಿದ್ದಾರೆ. ಇನ್ನು ನವೆಂಬರ್ 13ರಂದು ಸರೋಜಮ್ಮ ಎಂಬ ಬಾಣಂತಿ ಕೂಡ ಜೀವ ಬಿಟ್ಟಿದ್ದಾರೆ. ಏಳು ಜನರಲ್ಲಿ ಮೂವರು ಹೀಗೆ ಪ್ರಾಣ ಕಳೆದುಕೊಂಡಿದ್ದು, ಇನ್ನುಳಿದ ನಾಲ್ವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಈ ದುರಂತ ಸಂಭವಿಸಿ ನಾಲ್ಕು ದಿನಗಳಾಗಿವೆ. ಆದರೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಈ ಕಡೆ ಬಂದಿಲ್ಲ. ಈ ಘಟನೆಗೆ ಔಷಧಿಯೇ ಕಾರಣ ಎಂಬ ಅನುಮಾನವನ್ನು ಅಲ್ಲಿನ ಜನ ವ್ಯಕ್ತಪಡಿಸುತ್ತಿದ್ದಾರೆ. ಕೆಎಸ್ಎಂಎಸ್ಎಲ್ ಔಷಧಿಗಳನ್ನು ಪೂರೈಸುತ್ತಿದೆ. ಸಿಜೆರಿಯನ್ ಬಳಿಜ ಐವಿ ಫ್ಲೂಯಿಡ್ ಹಾಗೂ ಎನ್ಎಸ್ಎಲ್ ಗ್ಲೂಕೋಸ್ ಅನ್ನು ವೈದ್ಯರು ಹಾಕಿದ್ದರಂತೆ. ಆದರೆ ಬಾಣಂತಿಯರು ಸಾವನ್ನಪ್ಪಿದ್ದಾರೆ. ಇನ್ನೊಂದು ದುರಂತ ಎಂದರೆ ಸಿಜೆರಿಯನ್ ಮಾಡಿಸಿಕೊಂಡ ಬಾಣಂತಿಯರು ಮಾತ್ರ ಈ ರೀತಿ ಸಾವನ್ನಪ್ಪಿದ್ದಾರೆ. ಈ ಹಿಂದೆ ಇದೇ ಕಂಪನಿ ನೀಡಿದ್ದ ಔಷಧಿಯಿಂದ ತುಮಕೂರಿನಲ್ಲೂ ಹಲವರು ಪ್ರಾಣ ಬಿಟ್ಟಿದ್ದರು.
ಈ ಬಗ್ಗೆ ಶಾಸಕ ನಾರಾಭರತ್ ರೆಡ್ಡಿಯವರು ಮಾತನಾಡಿ, ಈ ರೀತಿ ಘಟನೆಯಾಗಿದೆ ಎಂಬುದನ್ನ ನನಗೆ ತಿಳಿಸಲಿಲ್ಲ, ನಾನೇ ಖುದ್ದಾಗಿ ಫೋನ್ ಮಾಡಿದಾಗ ಇಲ್ಲ ಸರ್ ಈ ರೀತಿ ಇನ್ಸಿಡೆಂಟ್ ಆಗಿದೆ, ಅದರಲ್ಲಿ ಒಬ್ಬರಿಗೆ ಪ್ಲೇಟ್ಲೆಟ್ಸ್ ಕಡಿಮೆಯಾಗಿದೆ ಅದರಿಂದ ಏನೋ ತೊಂದರೆಯಾಗಿದೆ ಎಂದರು. ನಾನು ಆಗ ಊರಲ್ಲಿ ಇರಲಿಲ್ಲ, ಬಂದು ಪರಿಶೀಲಿಸುತ್ತೇನೆ ಎಂದಾಗ, ಇಲ್ಲ ಸರ್ ನಾವು ಈಗಾಗಲೇ ಒಂದು ಏಳು ಜನರನ್ನ ವಿಮ್ಸ್ಗೆ ಶಿಫ್ಟ್ ಮಾಡಿದ್ದೇವೆ, ಅಲ್ಲಿ ಟ್ರೀಟ್ಮೆಂಟ್ ಮಾಡುತ್ತಿದ್ದಾರೆ ಎಂದರು. ನನಗೆ ಅವರು ಮಾತನಾಡುವ ರೀತಿಯಲ್ಲಿಯೇ ಸ್ಪಷ್ಟತೆ ಇರಲಿಲ್ಲ. ಅದಕ್ಕೋಸ್ಕರವೇ ಚೆಕ್ ಮಾಡುವುದಕ್ಕಾಗಿ ನಾನು ವಿಮ್ಸ್ಗೆ ಬಂದೆ ಎಂದರು.