ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದೆ. ಇತ್ತಿಚೆಗೆ ಅರಣ್ಯ ಇಲಾಖೆಯಿಂದ ತಂಡ ಎಚ್ಚರಿಕೆಯನ್ನು ಪಡೆದಿತ್ತು. ಇದೀಗ ತಂಡದ ಮೇಲೆ ಅರಣ್ಯ ಇಲಾಖೆ ಎಫ್ಐಆರ್ ಕೂಡ ದಾಖಲಿಸಿದೆ. ಮರಗಳ ಮಾರಣಹೋಮ ಮಾಡಿದ್ದಕ್ಕೆ ನ್ಯಾಯಾಲಯದ ಅನುಮತಿ ಪಡೆದು ಮೂವರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಿದೆ. ಸಿನಿಮಾದ ಶೂಟಿಂಗ್ ಎಚ್ಎಂಟಿಯಲ್ಲಿ ನಡೆಯುತ್ತಿತ್ತು. ಅಲ್ಲಿ ಮರಗಳನ್ನು ಕಡಿದು ದೊಡ್ಡ ಸೆಟ್ ನಿರ್ಮಾಣ ಮಾಡಿತ್ತು. ಇದರ ಫೋಟೋಗಳನ್ನು ಸ್ಯಾಟಲೈಟ್ ಮೂಲಕ ಪಡೆದಿದ್ದ ಅರಣ್ಯ ಇಲಾಖೆ ಈಗ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದೆ.

ಕೆವಿಎನ್ ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್, ಎಚ್ಎಂಟಿ ಲಿಮಿಟೆಡ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿತ್ರೀಕರಣಕ್ಕಾಗಿ ಮರಗಳನ್ನು ಕಡಿದ ಚಿತ್ರತಂಡ ಹಾಗೂ ಅದಕ್ಕೆ ಅವಕಾಶ ಕೊಟ್ಟ ಎಚ್ಎಂಟಿ ಲಿಮಿಟೆಡ್ ಮತ್ತು ಕೆನರಾ ಬ್ಯಾಂಕ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಇನ್ನು ಇದೇ ವಿಚಾರವಾಗಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಬೆಂಗಳೂರಿನಲ್ಲಿ ಕಾಂಕ್ರೀಟ್ ಕಾಡು ಬೆಳೆದಿದೆ. ಪೀಣ್ಯ ಪ್ಲಾಂಟೇಷನ್ 599 ಎಕರೆ ಇದೆ. 1997ರಲ್ಲಿ ಅರಣ್ಯ ಎಂದು ಅಧಿಸೂಚಿಲಾಗಿದೆ. ಮೀಸಲು ಅರಣ್ಯ ಎಂದು ಘೋಷಿಸಲಾಗಿದೆ. ಇದನ್ನು ಎಚ್‌ಎಂಟಿ ದಾನದ ರೂಪದಲ್ಲಿ ನೀಡಲಾಗಿದೆ. ಹೀಗಾಗಿ ಬೇರೆಯವರಿಗೆ ನೀಡಲು ಬರುವುದಿಲ್ಲ. ಟಾಕ್ಸಿಕ್ ಸಿನಿಮಾ ಸೆಟ್ ಹಾಕಿರುವ ಜಾಗಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಎಚ್‌ಎಂಟಿ ಈ ಹಿಂದೆ ಸ್ಪಷ್ಟಪಡಿಸಿದೆ. ಈ ಸಂಬಂಧ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿ, ‘ಸಿನಿಮಾ ಚಿತ್ರೀಕರಣಕ್ಕೆ ಸೆಟ್ ಹಾಕಿರುವ ಜಾಗ ಕೆನರಾ ಬ್ಯಾಂಕ್‌ನದ್ದಾಗಿದೆ. ಈಗಲೂ ಅದು ಬ್ಯಾಂಕ್ ಸುಪರ್ದಿಯಲ್ಲಿದೆ’ ಎಂದು ಸ್ಪಷ್ಟಪಡಿಸಿದೆ. ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಈಗಾಗಲೇ ಸೆಟ್‌ನ ಜಾಗಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ವಿಚಾರವಾಗಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ‘ಎಚ್‌ಎಂಟಿ ಜಾಗಕ್ಕೆ ರಾಜ್ಯ ಅರಣ್ಯ ಸಚಿವರು ಅತಿಕ್ರಮ ಪ್ರವೇಶ ಮಾಡಿದ್ದಾರೆ’ ಎಂದಿದ್ದರು


